ಜನನಿಬಿಡ ರಸ್ತೆಯನ್ನು ಬ್ಲಾಕ್ ಮಾಡಿ ಕಾರ್ಯಕ್ರಮ ಮಾಡಿದ ಮಂಗಳೂರು ಕಾಂಗ್ರೆಸ್!
ಮಂಗಳೂರನ್ನು ಕಾಂಗ್ರೆಸ್ಸಿಗರು ತಮ್ಮ ಪಕ್ಷದ ಆಸ್ತಿಯೆಂದು ತಿಳಿದುಕೊಂಡಿದ್ದಾರೆ. ಅದಕ್ಕಾಗಿ ತಮಗೆ ಎಲ್ಲಿ ಮನಸ್ಸಾಗುತ್ತೋ ಅಲ್ಲಿ ಕುರ್ಚಿ, ಸ್ಟೇಜ್ ಹಾಕಿ ಕಾರ್ಯಕ್ರಮ ಮಾಡುತ್ತಾರೆ. ಅದಕ್ಕೆ ಇವತ್ತು ಸಾಕ್ಷಿಯಾದದ್ದು ಮಂಗಳೂರಿನ ಜನನಿಬಿಡ ಪ್ರದೇಶ ಮಲ್ಲಿಕಟ್ಟೆ.
ಜಿಲ್ಲಾ ಕಾಂಗ್ರೆಸ್ ಕಚೇರಿ ಇರುವ ರಸ್ತೆ ಎನ್ನುವ ತಪ್ಪಿಗೆ ಸೋಮವಾರ ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳು, ಪ್ರಯಾಣಿಕರು ತೊಂದರೆ ಅನುಭವಿಸಿದರು. ರಸ್ತೆಯನ್ನು ಒಂದು ಕಡೆ ಬ್ಲಾಕ್ ಮಾಡಿದ ಕಾಂಗ್ರೆಸ್ ಕಾರ್ಯಕತ್ತರು ತಮ್ಮ ನಾಯಕರಿಗೆ ಅನುಕೂಲಕರವಾಗಿರಲಿ ಎನ್ನುವ ಕಾರಣಕ್ಕೆ ಕಚೇರಿಯ ಎದುರೇ ಸ್ಟೇಜ್ ನಿರ್ಮಿಸಿದ್ದರು. ಕಾರ್ಯಕ್ರಮಕ್ಕೆ ಸ್ಟೇಜ್ ಹಾಕುವ ಕೆಲಸ ಬೆಳಿಗ್ಗೆಯಿಂದಲೇ ಪ್ರಾರಂಭವಾಗಿದ್ದು ಮಧ್ಯಾಹ್ನದ ಬಳಿಕ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು. ಆ ರಸ್ತೆಯಲ್ಲಿ ಮೂರ್ನಾಕು ಆಸ್ಪತ್ರೆಗಳಿವೆ. ಅನೇಕ ವ್ಯಾಪಾರಿ ಕೇಂದ್ರಗಳಿವೆ. ಮಾರುಕಟ್ಟೆ ಇದೆ. ಅಂತಹ ಸ್ಥಳದಲ್ಲಿ ರಾಜಾರೋಷವಾಗಿ ರಸ್ತೆಯನ್ನು ನಾಲ್ಕು ಗಂಟೆ ಬ್ಲಾಕ್ ಮಾಡಿದ್ದು ಸರಿಯಾ ಎನ್ನುವುದು ಜನರ ಪ್ರಶ್ನೆ.
ಅಷ್ಟಕ್ಕೂ ಇದು ಕಾಂಗ್ರೆಸ್ ಪಕ್ಷದ ವೈಯಕ್ತಿಕ ಕಾರ್ಯಕ್ರಮ. ಇದಕ್ಕೂ ಸಾರ್ವಜನಿಕರಿಗೂ ಏನೂ ಸಂಬಂಧ ಇಲ್ಲ. ಒಂದು ವೇಳೆ ಸಭೆ ಮಾಡಲು ಜಾಗ ಬೇಕಾಗಿದ್ದಲ್ಲಿ ಅಲ್ಲಿಯೇ ಹತ್ತಿರದಲ್ಲಿ ಕದ್ರಿ ಬಯಲು ಮಂದಿರ ಇದೆ. ಅಲ್ಲಿ ಮಾಡಬಹುದಿತ್ತು. ಬಹುಶ: ಸೇರುವ ನಾಲ್ಕು ಜನರಿಗೋಸ್ಕರ ಅಲ್ಲಿ ಬೇಡಾ ಎಂದು ಬಿಲ್ಡಪ್ ಗಾಗಿ ಮುಖ್ಯರಸ್ತೆಯಲ್ಲಿಯೇ ಕುರ್ಚಿಗಳನ್ನು ಹಾಕಿದ್ದು ಸರಿಯಾ ಎನ್ನುವುದು ಜನರ ಪ್ರಶ್ನೆ.
ಅಲ್ಲಿನ ಸ್ಥಳೀಯರಾದ, ಸಾಮಾಜಿಕ ಹೋರಾಟಗಾರ ಜೆರಾಲ್ಡ್ ಟವರ್ಸ್ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೊಲೀಸ್ ಕಮೀಷನರ್ ಅವರಿಗೆ ತಾನು ಪತ್ರ ಮುಖೇನ ದೂರು ಕೊಡಲಿದ್ದು, ರಸ್ತೆ ಮಧ್ಯದಲ್ಲಿಯೇ ಕಾರ್ಯಕ್ರಮ ನಡೆಸಲು ಪೊಲೀಸ್ ಇಲಾಖೆ ಅನುಮತಿ ಕೊಟ್ಟಿದ್ದೆಯಾ ಎಂದು ಕೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಪೊಲೀಸ್ ಅನುಮತಿ ಇಲ್ಲದೆ ರಸ್ತೆ ಮಧ್ಯ ಕಾರ್ಯಕ್ರಮ ಮಾಡಿ ಮೂರ್ನಾಕು ಘಂಟೆ ರಸ್ತೆ ಬ್ಲಾಕ್ ಮಾಡಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ ಎಂದು ಜೆರಾಲ್ಡ್ ತಿಳಿಸಿದರು.
Leave A Reply