ಪೇಟಾ ಅರ್ಜಿ ತಿರಸ್ಕಾರ, ಕಂಬಳ ನಿರಾಳವಾಗುವ ಲಕ್ಷಣ ಗೋಚರ
ದೆಹಲಿ: ಕರ್ನಾಟಕದ ಜನಪ್ರಿಯ, ಕರಾವಳಿ ಭಾಗದ ಕರಳು, ಕಂಬಳ ಕುರಿತ ಸುಗ್ರೀವಾಜ್ಞೆಗೆ ತಡೆಯೊಡ್ಡಬೇಕು ಎಂದು ಪ್ರಾಣಿ ದಯಾ ಸಂಘ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಕಂಬಳ ನಿರಾಳವಾಗುವ ಲಕ್ಷಣಗಳು ಗೋಚರಿಸಿವೆ.
ಪೇಟಾ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಮೂವರು ಸದಸ್ಯರ ಪೀಠವು, ಈ ಹಂತದಲ್ಲಿ ಸುಗ್ರೀವಾಜ್ಞೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಈ ಕುರಿತು ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಸಹ ನೀಡಿದ್ದು, ಸುಗ್ರೀವಾಜ್ಞೆ ಕುರಿತ ಸಾಂವಿಧಾನಿಕ ಮಾನ್ಯತೆ ಕುರಿತು ನಿರ್ಧರಿಸಲು ನ.13ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ತಮಿಳುನಾಡಿನ ಜಲ್ಲಿಕಟ್ಟು ಜತೆಗೆ ರಾಜ್ಯದ ಕಂಬಳವನ್ನೂ ನಿಷೇಧಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನು ಮನಗಂಡಿದ್ದ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.
ಈಗ ನ.13ರಂದು ಸುಪ್ರೀಂ ಕೋರ್ಟ್ ಈ ಕುರಿತು ಮತ್ತೆ ವಿಚಾರಣೆ ನಡೆಸಲಿದ್ದು, ಒಂದು ವೇಳೆ ಕಂಬಳ ಪರ ತೀರ್ಪು ನೀಡಿದರೆ ಕರಾವಳಿ ಜನಪದ ಕ್ರೀಡೆ ಮತ್ತಷ್ಟು ಶ್ರೀಮಂತವಾಗುವುದರಲ್ಲಿ ಎರಡು ಮಾತಿಲ್ಲ.
Leave A Reply