ಕಾಶ್ಮೀರದಲ್ಲಿ ಮೂವರು ಉಗ್ರರ ಸಂಹಾರ
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ನೇಮಿಸಿರುವ ಸಂಧಾನಕಾರ ದಿನೇಶ್ವರ್ ಶರ್ಮಾ ಮಾತುಕತೆ ಮೂಲಕವಾದರೂ ಸಮಸ್ಯೆ ಬಗೆಹರಿಸುವ ಮಾತನಾಡಿರುವ ಬೆನ್ನಲ್ಲೇ ಗಡಿಯಲ್ಲಿ ಉಪಟಳ ಆರಂಭಿಸಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಪುಲ್ವಾಮಾ ಜಿಲ್ಲೆಯ ಕಂಡಿಲ್ ಆಗ್ಲಾರ್ ಗ್ರಾಮದ ಬಳಿ ಉಗ್ರರು ಅಡಗಿರುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಸೇನೆ, ಪೊಲೀಸರು ಹಾಗೂ ಸಿಆರ್ ಪಿಎಫ್ ಸಿಬ್ಬಂದಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಆದಾಗ್ಯೂ ಗುಂಡಿನ ಚಕಮಕಿ ವೇಳೆ ಒಬ್ಬ ನಾಗರಿಕರಿಗೆ ಗಾಯಗಳಾಗಿವೆ.
ಮೂವರು ಉಗ್ರರಲ್ಲಿ ಒಬ್ಬ ಸ್ಥಳೀಯ ಹಾಗೂ ಇಬ್ಬರು ವಿದೇಶಿ ಉಗ್ರರಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶ ಮುನೀರ್ ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಂದು ಸಾಮಾನ್ಯ ಪಿಸ್ತೂಲು ಹಾಗೂ ಒಂದು ಎಕೆ 47 ಗನ್ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ. ಗಾಯಾಳು ನಾಗರಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಪುಲ್ವಾಮಾ ಜಿಲ್ಲೆಯಲ್ಲಿ ಗೌಹಾರ್ ಭಟ್ ಎಂಬ ಆರೆಸ್ಸೆಸ್ ಮುಖಂಡರನ್ನ ಹತ್ಯೆ ಮಾಡಲಾಗಿತ್ತು. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಮಾತುಕತೆ ಮೂಲಕವಾದರೂ ಸರಿ, ಶಾಂತಿ ಕಾಪಾಡಬೇಕು ಎಂಬ ಕಾರಣ ಕೇಂದ್ರ ಸರ್ಕಾರ ದಿನೇಶ್ವರ್ ಶರ್ಮಾರನ್ನು ಸಂಧಾನಕಾರರನ್ನಾಗಿ ನೇಮಿಸಿದೆ.
Leave A Reply