ನೈತಿಕ ಬಲ ಕಳೆದುಕೊಂಡ ಕಮಲ್, ಪಕ್ಷ ಘೋಷಣೆ ಮುಂದೂಡಿದರೇ?
ತನ್ನ ಜನ್ಮದಿನದಂದು ಪಕ್ಷ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದ ಸಕಲಕಲಾವಲಭ, ಬಹುಭಾಷಾ ನಟ ಕಮಲ್ ಹಾಸನ್ ಈಗ ಪಕ್ಷ ಘೋಷಣೆಯನ್ನು ಮುಂದೂಡಿದ್ದಾರೆ. ಪಕ್ಷ ಘೋಷಣೆ ಮುಂಚೆಯೇ ಕಮಲ್ ಹಾಸನ್ ನೈತಿಕ ಬಲ ಕಳೆದುಕೊಂಡರೇ ಎಂಬ ಪ್ರಶ್ನೆ ಈಗ ಮೂಡದೇ ಇರದು. ಜನ್ಮದಿನದಂದು ಪಕ್ಷ ಘೋಷಣೆಗೆ ಶತಾಯ ಗತಾಯ ಭಾಗಶಃ ಎಲ್ಲ ಭೂಮಿಕೆಯನ್ನು ಸಿದ್ಧಪಡಿಸಿಕೊಂಡಿದ್ದ ಕಮಲ್. ಆದರೆ ಅದ್ಯಾವ ಯೋಚನೆ ಅವರನ್ನು ತಡೆಯಿತು ಎಂಬ ಅನುಮಾನ ಮೂಡುತ್ತಿದೆ.
ಅದಕ್ಕೆ ಅವರು ಇತ್ತೀಚೆಗೆ ವರ್ತಿಸುತ್ತಿರುವ ರೀತಿ, ನೀಡುತ್ತಿರುವ ಎಡಬಿಡಂಗಿ ಹೇಳಿಕೆಗಳು ಜನರ ವಿಶ್ವಾಸವನ್ನು ಕಸಿದುಕೊಂಡು ಬಿಟ್ಟಿವೆ. ಅಲ್ಲದೇ ಕಮಲ್ ರಾಜಕಾರಣಕ್ಕೆ ಅರ್ಹನಲ್ಲ ಎಂಬುದನ್ನು ವಿಶೇಷವಾಗಿ ತಮಿಳುನಾಡಿನ ಜನ ಅರ್ಥೈಸಿಕೊಂಡಿದ್ದಾರೆ. ಎಂಬುದು ಕಮಲ್ ತಿಳಿದುಕೊಂಡೇ ಸದ್ಯ ಈ ಪಕ್ಷ ಘೋಷಣೆ, ಸ್ಥಾಪನೆಯ ಉಸಾಬರಿಯೇ ಬೇಡ ಎಂದು ಕೈ ಚೆಲ್ಲಿ ಕುಳಿತಿದ್ದಾರೆಯೇ ಎಂಬುದು ದಿಟ.
‘ಈಗ ಕೇಸರಿ ಭಯೋತ್ಪಾದನೆ ಕುರಿತು ಹೇಳಿಕೆ ನೀಡಿದನ್ನು, ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ’ ಎಂದು ಹೇಳಿರುವುದು ತಮ್ಮ ಹೇಳಕೆಯಲ್ಲಿ ಕಮಲ್ ಗೆ ದೃಢತೆಯಿಲ್ಲ ಎಂಬುದು ಸಾಬೀತಾಗಿದೆ. ಈ ಮಾತು ಹೇಳಿ ಎಲ್ಲಿ ಎಡವಿದೆನೋ ಎಂಬ ಆತಂಕದಲ್ಲಿ ಈಗ ಮಾಧ್ಯಮದ ಮೇಲೆ ತಮ್ಮ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಆದರೆ ಅದು ಸಫಲವಾಗುವುದಿಲ್ಲ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬಂತಿರುವಾಗ ಈಗ ಮಾಧ್ಯಮದವರ ತಪ್ಪು ಎಂದು ಹೇಳಿದರೆ ಕೇಳಲು ಜನರೇನು ಮೂರ್ಖರೆ?
ಇನ್ನು ತಮಿಳುನಾಡಿನಲ್ಲಿ ತನ್ನ ಪಕ್ಷದ ನೆಲೆ ಕಾಣಿಸಿಕೊಳ್ಳಲು ಹಂಬಲಿಸುತ್ತಿರುವ ಕಮಲ್ ಗೆ ಮೋದಿ ವಿರೋಧಿ, ಹಿಂದೂ ವಿರೋಧಿ, ಕಮ್ಯುನಿಸ್ಟ್ ಪ್ರೇಮಿ ಅಲ್ಲದೇ ಬುದ್ಧಿಜೀವಿಗಳ ಪಟ್ಟ ದೊರೆತಿರುವುದು ಭಾರಿ ಹಿನ್ನಡೆಗೆ ಕಾರಣವಾಗಿದೆ. ಇದು ಕಮಲ್ ಹಾಸನ್ ಚಿಂತೆಗೀಡು ಮಾಡಿದೆ. ಮೋದಿ ವಿರೋಧಿ, ಹಿಂದೂ ವಿರೋಧಿಯಾದರೇ ಒಂದಿಷ್ಟು ಮತ ಗಳಿಸಬಹುದು ಎಂಬ ಲೆಕ್ಕಾಚಾರದಲ್ಲಿ ಎಡವಿದ್ದಾರೆ.
ತಮಿಳುನಾಡಿನ ಜನ ನಾವು ಹಿಂದೂಗಳಲ್ಲ ಎಂದು ಎಂದಿಗೂ ಹೇಳಿಲ್ಲ, ಅವರು ದ್ರಾವಿಡರು, ಅಪ್ಪಟ ಭಾಷಾಂಧರು ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯದ ಒಳಿತಿಗಾಗಿ ತಮಿಳುನಾಡಿನ ಜನ ಮೋದಿಗೂ ಮತ ನೀಡಿದರೂ ನೀಡಿಯಾರು. ಬರೀ ಸಿದ್ಧಾಂತವಿಟ್ಟುಕೊಂಡು ಕಮಲ್ ತಮಿಳುನಾಡಿನಲ್ಲಿ ರಾಜಕೀಯ ಮಾಡ ಹೊರಟರೇ ಅದಕ್ಕಿಂತ ಮೂರ್ಖತನವಾದ ಯಾವುದು ಇಲ್ಲ. ಇನ್ನು ಇವರು ಬೆನ್ನತ್ತಿರುವ ಹಳಸಲು ಕಮ್ಯುನಿಸ್ಟ್ ಸಿದ್ಧಾಂತ, ಹಿಂದೂ ವಿರೋಧಿ ಸಿದ್ಧಾಂತದ ರಾಜಕೀಯ ಅಲ್ಲಿ ನಡೆಯುವುದಿಲ್ಲ.
ಭಾರತ ಜಾತ್ಯಾತೀತ ದೇಶ, ಇಲ್ಲಿ ಸಾವಿರಾರು ಜಾತಿಗಳು, ಹಲವಾರು ಧರ್ಮಗಳು, ಸಮುದಾಯಗಳು ಇವೆ. ಎಲ್ಲ ಸಮುದಾಯಗಳಿಗೂ ಅದರದ್ದೇ ಆದ ಸೂಕ್ಷ್ಮತೆಗಳಿವೆ. ಅದನ್ನು ಮರೆತು ಯಾವುದೇ ಜನಪ್ರಿಯ ವ್ಯಕ್ತಿ ಮಾತನಾಡಿದರೂ ಅವರ ಕಥೆ ಅಷ್ಟೇ. ಎಂಥದ ಪ್ರಬಲ ಸಾಕ್ಷ್ಯಗಳಿದ್ದರೂ ನ್ಯಾಯಂಗ ವ್ಯವಸ್ಥೆ ಹೇಳಿದಾಗ ಮಾತ್ರ ದೇಶದ ಜನ ಒಪ್ಪುತ್ತಾರೆ. ಇಂತಹ ಸೂಕ್ಷ್ಮ ಭಾವನೆಗಳಿರುವ ರಾಷ್ಟ್ರದಲ್ಲಿ, ಹಿಂದೂಗಳೇ ಬಹುಸಂಖ್ಯಾತರಾಗಿರುವಾಗ ಅವರೇ ಭಯೋತ್ಪಾದಕರು ಎಂದರೆ ಹೇಗಾಗಬೇಡ.
ಸಾವಿರಾರು ವರ್ಷಗಳಿಂದ ಹಲವು ಧರ್ಮಗಳಿಗೆ ನೆಲೆ ನೀಡಿ, ರಕ್ಷಿಸಿ ಪೋಷಿಸಿಕೊಂಡು ಬಂದಿರುವ ಹಿಂದೂಗಳ ವಿರುದ್ಧ ಮಾತನಾಡಿರುವ ಕಮಲ್ ಗೆ ವ್ಯಕ್ತವಾಗಿರುವ ವಿರೋಧದಿಂದ ಸಹಜವಾಗಿಯೇ ನೈತಿಕತೆ ಕುಸಿದಿದೆ. ಆದ್ದರಿಂದಲೇ ಜನ್ಮದಿನದಂದು ಪಕ್ಷ ಘೋಷಣೆ ಮಾಡುತ್ತೇನೆ ಎಂದವರು ‘ಪಕ್ಷ ಸ್ಥಾಪನೆ ನಿರ್ಧಾರದಿಂದ ಹಿಂದೆ ಸರಿಯುವುದೇ ಇಲ್ಲ’ ಶೀಘ್ರದಲ್ಲಿ ಎಲ್ಲವನ್ನು ಹೇಳುತ್ತೇನೆ’ ಎಂದು ಕಾಲ್ಕಿತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಸಫಲವಾಗುತ್ತೋ ಕಾದು ನೋಡೋಣ.
ಕಮಲ್ ಬುದ್ಧಿಜೀವಿಯಂತೆ ಆಡುವುದನ್ನು ಬಿಡುವವರೆಗೆ ರಾಜಕೀಯದಲ್ಲಿ ಅವರು ಮತ್ತು ಅವರ ಪಕ್ಷ ನೆಲೆ ಕಂಡುಕೊಳ್ಳುವುದೇ ಕಷ್ಟಸಾಧ್ಯ.
Leave A Reply