ರಾಮಚಂದ್ರ ಗುಹಾಗೇನು ಗೊತ್ತು ಜನರಲ್ ಕಾರ್ಯಪ್ಪರ ತಾಕತ್ತು?
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ…
ಈ ಹೆಸರು ಕೇಳುತ್ತಲೇ ಕೊಡಗಿನ ಆರು ವರ್ಷದ ಬಾಲಕನ ಪ್ರತಿ ರೋಮವೂ ಎದ್ದುನಿಲ್ಲುತ್ತದೆ. ದೇಶದ ಗಡಿ ಕಾಯುವ ಸೈನಿಕ ಮನಸ್ಸಲ್ಲೇ ಸೆಲ್ಯೂಟ್ ಹೊಡೆಯುತ್ತಾನೆ. ಉತ್ತರ ಕರ್ನಾಟಕದ ಕಡೇ ಜಿಲ್ಲೆ, ಬೀದರಿನ ಹುಡುಗನೂ, ಎದ್ದು ನಿಂತು, ಸ್ವತಂತ್ರ ಭಾರತದ ಮೊದಲ ಜನರಲ್, ಸೇನಾ ಮುಖ್ಯಸ್ಥ ಎನ್ನುತ್ತಾನೆ. ಅಷ್ಟೇ ಏಕೆ, ಇಡೀ ದೇಶವೇ ಕಾರ್ಯಪ್ಪರ ಶೌರ್ಯ, ಧೈರ್ಯವನ್ನು ಮೆಚ್ಚುತ್ತದೆ. ಸೈನ್ಯ ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡಿದೆ. ಹೀಗೆ ಇಡೀ ದೇಶದಿಂದಲೇ ಮೆಚ್ಚುಗೆಗೆ ಪಾತ್ರವಾದ ಕಾರ್ಯಪ್ಪರ ಬಗ್ಗೆ ದೇಶದಲ್ಲೇ ಇರುವ, ಕರ್ನಾಟಕದ ಅನ್ನ ತಿಂದರೂ, ಕನ್ನಡವೇ ಬಾರದ ಕೃತಘ್ನ ಮನಸ್ಸೊಂದು ಕಾರ್ಯಪ್ಪರ ಕಾರ್ಯವೈಖರಿಯನ್ನೇ ಪ್ರಶ್ನಿಸಿ ಮನಸ್ಸಿನ ನಂಜು ಕಾರಿದೆ.
ಆ ಕೃತಘ್ನ ಮನಸ್ಸಿನ ಹೆಸರು ಸೋ ಕಾಲ್ಡ್ ಇತಿಹಾಸಕಾರ ರಾಮಚಂದ್ರ ಗುಹಾ…
ಮೊನ್ನೆಯಷ್ಟೇ ಕೊಡಗಿಗೆ ಆಗಮಿಸಿದ್ದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಒಂದು ಮಾತು ಹೇಳಿದ್ದರು. ಕಾರ್ಯಪ್ಪ ಅವರಿಗೆ ಭಾರತರತ್ನ ಸಿಗಬೇಕು. ಈ ಕುರಿತು ಶಿಫಾರಸು ಮಾಡಲಾಗುವುದು ಎಂದರು. ಇಡೀ ದೇಶದಲ್ಲಿ ಯಾವನೇ ಒಬ್ಬ ಈ ಮಾತಿನಲ್ಲಿ ಹುಳುಕು ಹುಡುಕಲು ಸಾಧ್ಯವಿಲ್ಲ. ಏಕೆಂದರೆ ಕಾರ್ಯಪ್ಪನವರಿಗೆ ಭಾರತರತ್ನ ಕೊಟ್ಟರೆ ದೇಶಕ್ಕೇ ಗೌರವ.
ಆದರೆ…
ಬಿಪಿನ್ ರಾವತ್ ಸೇನಾಧಿಕಾರಿಯಾಗಿ ತುಂಬ ಮಾತನಾಡುತ್ತಾರೆ ಎಂದು ಸುಖಾಸುಮ್ಮನೆ ಟೀಕಿಸಲು ಹೊರಟ ರಾಮಚಂದ್ರ ಗುಹಾ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದಾರೆ. ಆ ಲೇಖನದಲ್ಲಿ ಕಾರ್ಯಪ್ಪನವರ ಬಗ್ಗೆ ಉಲ್ಲೇಖಿಸುತ್ತ, “ಬಿಪಿನ್ ರಾವತ್ ಅವರು ಕಾರ್ಯಪ್ಪ ಅವರಿಗೆ ಭಾರತರತ್ನಕ್ಕೆ ಶಿಫಾರಸು ಮಾಡುವುದಾಗಿ ಹೇಳಿಕೆ ನೀಡಬಾರದಿತ್ತು. ಕಾರ್ಯಪ್ಪ ಸೇನಾ ಮುಖ್ಯಸ್ಥರಾಗಿದ್ದರೂ ಅವರಿಗೆ ಅಂತ ತಂತ್ರಗಾರಿಕೆ, ಯುದ್ಧಪಟ್ಟುಗಳು ಗೊತ್ತಿರಲಿಲ್ಲ. ಅವರಿಗಿಂತ ಖ್ಯಾತನಾಮರು ಸೈನ್ಯದಲ್ಲಿದ್ದರು” ಎಂದಿದ್ದಾರೆ.
ರಾಮಚಂದ್ರ ಗುಹಾ ಎಂಬ ತಥಾಕಥಿತ ಎಡಪಂಥೀಯ, ಕಾಂಗ್ರೆಸ್ಸಿನ ಮುಖವಾಣಿ ಹೇಗೆ ಇತಿಹಾಸಕಾರರಾದರೋ? ಅದ್ಹೇಗೆ ಕಾರ್ಯಪ್ಪನವರ ತಂತ್ರಗಾರಿಕೆ ಪ್ರಶ್ನಿಸಿದರೋ? ಅವರ ಬುದ್ಧಿಗೆ ಯಾವ ಮಂಕು ಕವಿದಿದೆಯೋ ಗೊತ್ತಿಲ್ಲ. ಹೀಗೆ ಕಾರ್ಯಪ್ಪನವರ ಬಗ್ಗೆ ಪ್ರಶ್ನೆ ಎತ್ತಿದ, ನಂಜು ಕಾರಿದ ರಾಮಚಂದ್ರ ಗುಹಾ ಅವರಿಗೆ ಒಂದಿಷ್ಟು ಪ್ರಶ್ನೆಗಳಿವೆ. ಇವುಗಳಿಗೆ ಉತ್ತರಿಸುವ ಎದೆಗಾರಿಕೆಯನ್ನು ಇತಿಹಾಸಕಾರ ಗುಹಾ ತೋರಿದರೆ ಸರಿ. ಇಲ್ಲದಿದ್ದರೂ ಕಾರ್ಯಪ್ಪನವರ ಬಗ್ಗೆ ದೇಶಕ್ಕಿರುವ ಬಗ್ಗೆ ಹೆಮ್ಮೆ ಎಂಥಾದ್ದು, ಕಾರ್ಯಪ್ಪನವರ ಶೌರ್ಯ, ಯುದ್ಧತಂತ್ರ ಎಂಥಾದ್ದು? ಎಂಬುದನ್ನು ತಿಳಿದುಕೊಳ್ಳುತ್ತಲೇ ಗುಹಾ ಅವರಿಗೆ ಒಂದಷ್ಟು ಪ್ರಶ್ನೆಗಳಿವೆ. ಅವು ಇಲ್ಲಿವೆ…
-
ಭಾರತೀಯರೆಂದರೆ ಚಡ್ಡಿಯೊಳಗೆ ಚೇಳು ಬಿಟ್ಟುಕೊಂಡ ಹಾಗೆ ಆಡುತ್ತಿದ್ದ ಬ್ರಿಟಿಷರೇ ನೇಮಿಸಿದ ಸೇನೆಯ ಮೊದಲ ಬ್ಯಾಚಿನ ಸದಸ್ಯ ಕೆ.ಎಂ.ಕಾರ್ಯಪ್ಪ. ಕಾರ್ಯಪ್ಪ ಅವರಿಗೆ ಯುದ್ಧತಂತ್ರ ಗೊತ್ತಿರದೇ ಹೋಗಿದ್ದರೆ, ಯುದ್ಧಕಣದಲ್ಲಿ ಕಾರ್ಯಪ್ಪ ಸಮರ್ಥರಾಗಿರದಿದ್ದರೆ ಬ್ರಿಟಿಷರೇ ಅವರನ್ನು ನೇಮಿಸಿಕೊಳ್ಳುತ್ತಿತ್ತೇ ರಾಮಚಂದ್ರ ಗುಹಾ ಅವರೇ?
-
ಮುಖದ ಮೇಲೆ ಮೀಸೆಯೇ ಸ್ಪಷ್ಟವಾಗಿ ಮೂಡದ ವಯಸ್ಸಲ್ಲಿ, ಅಂದರೆ 20ನೇ ವಯಸ್ಸಿಗೇ ಬ್ರಿಟಿಷ್ ಇಂಡಿಯಾ ಸೇನೆ ಸೇರಿದ ಕಾರ್ಯಪ್ಪನವರ ದಕ್ಷತೆ ಗುರುತಿಸಿ, ಅವರನ್ನು ಬಾಂಬೆಯ 88ನೇ ಕಾರ್ನಾಟಿಕ್ ಇನ್ಫಾಂಟ್ರಿ ಪಡೆಗೆ ಅಧಿಕಾರಿಯನ್ನಾಗಿ ನೇಮಸಿತು. ಅಲ್ಲಿ ಅವರು ಎರಡನೇ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸಿದರು. ಬ್ರಿಟಿಷರು ಸುಖಾಸುಮ್ಮನೆ ಕಾರ್ಯಪ್ಪ ಅವರನ್ನು ಅಧಿಕಾರಿಯನ್ನಾಗಿ ನೇಮಿಸಿದರೋ ಅಥವಾ ಅವರಿಗೆ ಅಧಿಕಾರ ನೀಡುವಂತೆ ಗುಹಾ ಸಂಬಂಧಿಕರಾದರೂ ಶಿಫಾರಸು ಮಾಡಿದ್ದರೋ?
-
1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾದಾಗ ದೇಶದ ಸೈನ್ಯಕ್ಕೆ ಭಾರತದಲ್ಲಿದ್ದ ಒಕ್ಕೂಟಗಳನ್ನು ಒಗ್ಗೂಡಿಸುವ ಮಹತ್ತರ ಜವಾಬ್ದಾರಿ ಸೈನ್ಯದ ಮೇಲಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ, 1947-48ರ ಇಂಡೋ ಪಾಕ್ ಯುದ್ಧದಲ್ಲಿ ಸೈನ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ ಕಾರ್ಯಪ್ಪನವರ ಕಾರ್ಯಕ್ಷಮತೆಯೇನು ಕಡಿಮೆಯೇ? ಕಾರ್ಯಪ್ಪರ ಶೌರ್ಯ ಗೊತ್ತಿರದೇ ಭಾರತ ಸರ್ಕಾರ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿತೆ? ಇತಿಹಾಸಕಾರರಿಗೇ ಇದು ಗೊತ್ತಿಲ್ಲವೇ? ಅಥವಾ?
-
ಇನ್ನು ರಾಮಚಂದ್ರ ಗುಹಾ ಲೇಖನದಲ್ಲಿ ಕಾರ್ಯಪ್ಪನವರಿಗಿಂತ ಖ್ಯಾತಿ ಹೊಂದಿದ್ದರು ಎಂದು ಮತ್ತೊಬ್ಬ ಮಹಾ ಯೋಧ ಕೆ.ಎಸ್.ತಿಮ್ಮಯ್ಯ ಅವರ ಕುರಿತು ಉಲ್ಲೇಖಿಸಿದ್ದಾರೆ. ಆದರೆ, ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವಾಗ ಅದರ ಉಸ್ತುವಾರಿಯನ್ನು ತಿಮ್ಮಯ್ಯ ಅವರಿಗೆ ನೀಡಿದ್ದೇ ಕಾರ್ಯಪ್ಪ ಅವರು. ಅದಾದ ಬಳಿಕವೇ ತಿಮ್ಮಯ್ಯ ಖ್ಯಾತಿಯಾದರು. ಈಗ ಹೇಳಿ, ಗುರು ಮಿಗಿಲೋ, ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದ ಶಿಷ್ಯ ಮಿಗಿಲೋ? ಯಾರಿಗೆ ಮೊದಲು ಭಾರತ ರತ್ನ ನೀಡಬೇಕು?
-
ರಾಮಚಂದ್ರ ಗುಹಾ ಅವರೇ, ನಿಮಗೆ ನೆನಪಿರಲಿ, ಕೆ.ಎಂ.ಕಾರ್ಯಪ್ಪ ಅವರನ್ನು ಭಾರತೀಯ ಸೈನ್ಯದ ಪಿತಾಮಹ ಎಂದು ಕರೆಯಲಾಗಿದೆ. ಅವರಿಗೆ ತಂತ್ರಗಾರಿಕೆ, ಶೌರ್ಯ, ಕೌಶಲ ಗೊತ್ತಿರದೇ ಇದ್ದರೂ ಸೈನ್ಯದ ಪಿತಾಮಹ ಎಂದು ಕರೆಯಲಾಯಿತೇ? ನಿಮಗೆ ಕನ್ನಡ ಗೊತ್ತಿರದಿದ್ದರೂ ಕಾಂಗ್ರೆಸ್ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬಹುದು, ಆದರೆ ಅಸಮರ್ಥರಿಗೆ ಸೈನ್ಯದ ಪಿತಾಮಹ ಎಂಬ ಬಿರುದು ಬಿಡಿ, ಸೈನ್ಯದೊಳಕ್ಕೇ ಸೇರಿಸಲ್ಲ.
-
ಕಾರ್ಯಪ್ಪ ಅವರು ಸ್ವತಂತ್ರ ಭಾರತದ ಸೇನೆಯ ಮೊದಲ ಮುಖ್ಯಸ್ಥ ಅಷ್ಟೇ ಅಲ್ಲ, ಅವರು ಮೊದಲ ಜನರಲ್ ಆಫೀಸರ್, ಸ್ವಾತಂತ್ರ್ಯಕ್ಕೂ ಬರುವ ಮೊದಲಿನ ಪ್ರಥಮ ಭಾರತೀಯ ಬ್ರಿಗೇಡಿಯರ್, ಭಾರತೀಯ ಸೈನ್ಯದ ಮೊದಲ ಕಮಾಂಡಿಂಗ್ ಆಫೀಸರ್. ಇಷ್ಟೆಲ್ಲ ಸಾಧನೆ ಮಾಡಿದ ಬೇರೆಯವರನ್ನು ತೋರಿಸುವಿರಾ ಗುಹಾ?
-
ಲೇಖನದಲ್ಲಿ ಡೆಹ್ರಾಡೂನಿನ ಇಂಡಿಯನ್ ಮಿಲಿಟರ್ ಅಕಾಡೆಮಿ ಬಳಿಯೇ ಹುಟ್ಟಿ, ಬೆಳೆದಿದ್ದೇನೆ ಎಂದು ಗುಹಾ ಉಲ್ಲೇಖಿಸಿದ್ದಾರೆ. ಅದೇ ಡೆಹ್ರಾಡೂನಿನ ಮಿಲಿಟರಿ ಅಕಾಡೆಮಿಗೆ ಸೇರಿದ ಮೊದಲ ಭಾರತೀಯ ಕಾರ್ಯಪ್ಪ ಅವರು. ಅಕಾಡೆಮಿ ಪಕ್ಕದಲ್ಲೇ ಇದ್ದ ನಿಮಗೆ ಈ ಸಂಗತಿ ಗೊತ್ತಿಲ್ಲವೇ?
-
ಇನ್ನು ಕೆ.ಎಂ.ಕಾರ್ಯಪ್ಪ ಅವರಿಗೆ ಯುದ್ಧ ಕೌಶಲ ಗೊತ್ತಿಲ್ಲ ಎಂದಿದ್ದರೆ, ಅವರು ದಿ ಬೆಸ್ಟ್ ಆಗಿರದಿದ್ದರೆ, ಸೇನಾ ಮುಖ್ಯಸ್ಥ ಬಿಪಿನ್ ರಾವತರೇಕೆ ಕಾರ್ಯಪ್ಪ ಅವರ ಹೆಸರನ್ನು ಭಾರತ ರತ್ನಕ್ಕೆ ಶಿಫಾರಸು ಮಾಡುವುದಾಗಿ ಹೇಳುತ್ತಿದ್ದರು? ಹಾಗೆ ಹೇಳಿದುದರಲ್ಲಿ ಯಾವ ತಪ್ಪಿದೆ?
ರಾಮಚಂದ್ರ ಗುಹಾ ಅವರೇ, ನೀವೊಬ್ಬ ಎಡಪಂಥೀಯ, ಕಾಂಗ್ರೆಸ್ ಪರ ಬಿಂಬಿಸಿಕೊಳ್ಳುವುದಿದ್ದರೆ ಬಿಂಬಿಸಿಕೊಳ್ಳಿ. ಅದರಲ್ಲಿ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ, ದೇಶಕ್ಕಾಗಿ ಹೋರಾಡಿದ, ದೇಶವೇ ಮೆಚ್ಚುವ ಯೋಧರಾದ ನಮ್ಮ ಕೊಡಗಿನ ಅಜ್ಜ ಕಾರ್ಯಪ್ಪನವರ ಬಗ್ಗೆ ಮಾತನಾಡುವಾಗ ನಾಲಿಗೆ ಹುಚ್ಚಾಪಟ್ಟೆ ಹರಿಬಿಡದಿರಿ. ನೀವು ಬೆಚ್ಚಗೆ ಮನೆಯಲ್ಲಿ ಮಲಗುವ ಹಿಂದೆ ಕಾರ್ಯಪ್ಪರಂಥ ಯೋಧರು ನಿದ್ದೆಗೆಟ್ಟು ದೇಶ ಕಾಯುತ್ತಿದ್ದಾರೆ ಎಂಬುದನ್ನು ಮರೆಯದಿರಿ. ಮನಸ್ಸನ್ನು ಕೃತಘ್ನರನ್ನಾಗಿ ಮಾಡಿಕೊಳ್ಳದಿರಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೀಳುಮಟ್ಟಕ್ಕೆ ಬಳಸಿಕೊಳ್ಳದಿರಿ.
ನಿಮಗೆ ಇನ್ನೊಂದು ವಿಷಯ ಗೊತ್ತಿರಲಿ. ಮರಣೋತ್ತರವಾಗಿ ಕಾರ್ಯಪ್ಪನವರಿಗೆ ಭಾರತರತ್ನ ಕೊಟ್ಟರೆ ಇಡೀ ದೇಶ ಹೆಮ್ಮೆ ಪಡುತ್ತದೆ.
Leave A Reply