21 ಶತಮಾನ ನಮ್ಮದಾಗಿಸಿಕೊಳ್ಳಲು ಎಲ್ಲರೂ ಶ್ರಮಿಸೋಣ: ಪ್ರಧಾನಿ ಮೋದಿ ಕರೆ

ಮನಿಲಾ: ಇಪ್ಪತ್ತೊಂದನೇ ಶತಮಾನವನ್ನು ಭಾರತದ್ದನ್ನಾಗಿಸಿಕೊಳ್ಳಲು ಎಲ್ಲರೂ ಶ್ರಮಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಫಿಲಿಪ್ಪೈನ್ಸ್ ನಲ್ಲಿ ಆಸಿಯನ್ ಶೃಂಗಸಭೆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಈ ದಿಸೆಯಲ್ಲಿಯೇ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಅಭಿವೃದ್ಧಿಯಲ್ಲಿ ದೇಶವನ್ನು ರೂಪಾಂತರಗೊಳಿಸುವುದೇ ನಮ್ಮ ಬದ್ಧತೆ ಎಂದು ತಿಳಿಸಿದ್ದಾರೆ.
ಈ ಹಾದಿಯಲ್ಲಿ ನಮಗೆ ಹಲವು ಸವಾಲುಗಳು ಎದುರಾಗಬಹುದು. ಕಲ್ಲು-ಮುಳ್ಳುಗಳೇ ಅಡ್ಡಿಯಾಗಬಹುದು. ಆದರೆ ನಾವು ಇದಾವುದಕ್ಕೂ ಜಗ್ಗದೆ, ಮುನ್ನುಗ್ಗೋಣ. 21ನೇ ಶತಮಾನವನ್ನು ನಮ್ಮದಾಗಿಸಿಕೊಳ್ಳೋಣ ಎಂದರು.
ಅದಕ್ಕಾಗಿ ನಮ್ಮ ಸರ್ಕಾರ ಬದ್ಧವಾಗಿದ್ದು, ಹಲವು ಮಹತ್ತರ ಹೆಜ್ಜೆ ಇಟ್ಟಿದೆ. ದೇಶದ ಯಾರಿಗೂ ಸ್ವಚ್ಛತೆಯ ಕಲ್ಪನೆಯಿರಲಿಲ್ಲ. ಅಂಥಾದ್ದೊಂದು ಕಲ್ಪನೆಯನ್ನು ಮಹಾತ್ಮ ಗಾಂಧೀಜಿಯವರು ಬಿಟ್ಟು ಹೋಗಿದ್ದರು. ಆದರೆ ನಾವು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದೆವು ನೋಡಿ, ದೇಶದ 2.25 ಲಕ್ಷ ಕುಟುಂಬಗಳು ಬಯಲು ಶೌಚಮುಕ್ತ ಗ್ರಾಮಗಳಾಗಿವೆ. ನಮ್ಮ ಜನಧನ್, ಉಜ್ವಲ ಯೋಜನೆಗಳು ದೇಶದ ರೂಪಾಂತರಕ್ಕಾಗಿಯೇ ರೂಪಿಸಲಾಗಿದೆ ಎಂದು ತಿಳಿಸಿದರು.
ಮೂರು ದಿನಗಳ ಆಸಿಯನ್ ಶೃಂಗಸಭೆ ಹಿನ್ನೆಲೆ ಮೋದಿ ಭಾನುವಾರ ಫಿಲಿಪ್ಪೈನ್ಸ್ ತಲುಪಿದ್ದು, ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Leave A Reply