ಫಾರೂಕ್ ಅಬ್ದುಲ್ಲಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಬಿಹಾರ ಹೈಕೋರ್ಟ್ ಆದೇಶ
ಪಟನಾ: ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಬಿಹಾರ ಹೈಕೋರ್ಟ್ ಆದೇಶಿಸಿದೆ.
ಫಾರೂಕ್ ಹೇಳಿಕೆ ವಿರೋಧಿಸಿ ಸ್ಥಳೀಯ ವಕೀಲ ಮುರಾದ್ ಅಲಿ ಎಂಬುವವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೈರಾಮ್ ಪ್ರಸಾದ್, ಅಬ್ದುಲ್ಲಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ತೀರ್ಪು ನೀಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ ಸ್ವತ್ತು. ಅದು ಇಸ್ಲಾಮಾಬಾದ್ ಗೆ ಸಂಬಂಧಿಸಿದ್ದು ಎಂದು ಫಾರೂಕ್ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲ, ಜಮ್ಮು ಕಾಶ್ಮೀರ ರಾಜ್ಯವನ್ನು ಕೇಂದ್ರ ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಹಾಗೂ ಸರಿಯಾದ ಸೌಲಭ್ಯ ನೀಡುತ್ತಿಲ್ಲ ಎಂದು ಹೇಳುವ ಮೂಲಕ ಫಾರೂಕ್ ವಿವಾದ ಸೃಷ್ಟಿಸಿದ್ದರು.
1994ರಲ್ಲಿ ಸಂಸತ್ತು ಅಂಗೀಕರಿಸಿದ ಮಸೂದೆ ಪ್ರಕಾರ, ಜಮ್ಮು-ಕಾಶ್ಮೀರ ಸಂಪೂರ್ಣ ಭಾರತಕ್ಕೆ ಸಂಬಂಧಿಸಿದ್ದು ಎಂದು ಉಲ್ಲೇಖವಿದೆ. ಅಲ್ಲದೆ, ಫಾರೂಕ್ ಹೇಳಿಕೆ ದೇಶದ್ರೋಹ ಮಾತ್ರವಲ್ಲ, ಭಾರತದ ವೈವಿಧ್ಯತೆಯನ್ನೇ ಪ್ರಶ್ನಿಸಿದಂತೆ ಎಂದು ಮುರಾದ್ ಅಲಿ ಅರ್ಜಿಯಲ್ಲಿ ತಿಳಿಸಿದ್ದರು.
Leave A Reply