ಥಾಮಸ್ ಚಾಂಡಿ ರಾಜೀನಾಮೆ, ಕಮ್ಯುನಿಸ್ಟ್ ಸರ್ಕಾರದ ಮೂರನೇ ವಿಕೆಟ್ ಪತನ
ತಿರುವನಂತರಪುರ: ಕೇರಳದ ಅಳಪ್ಪುಳದ ಲೇಕ್ ಪ್ಯಾಲೆಸ್ ರೆಸಾರ್ಟ್ ಗಾಗಿ ಅಕ್ರಮವಾಗಿ ಭೂಮಿ ವಶಪಡಿಸಿಕೊಂಡಿದ್ದಲ್ಲದೇ, ಭತ್ತದ ಗದ್ದೆಗಳ ಮೂಲಕ ರಸ್ತೆ ನಿರ್ಮಿಸಿದ ಹಗರಣದ ಆರೋಪ ಹೊತ್ತಿದ್ದ ಕಮ್ಯುನಿಸ್ಟ್ ಸರ್ಕಾರದ ಸಚಿವ ಥಾಮಸ್ ಚಾಂಡಿ ಕೊನೆಗೂ ರಾಜೀನಾಮೆ ನೀಡಿದ್ದಾರೆ.
ಆರೋಪ ಕೇಳಿಬಂಧ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸುವಂತೆ ಕಳೆದ ವಾರ ವಿಚಾರಣಾ ನ್ಯಾಯಾಲಯ ತಿಳಿಸಿತ್ತು. ಹಗರಣದ ಕುರಿತು ಅಳಪ್ಪುಳ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು.
ವರದಿ ಪರಿಶೀಲಿಸಿದ ಕೇರಳ ಹೈಕೋರ್ಟ್, ಹಗರಣ ಆರೋಪ ಹೊತ್ತಿರುವ ನೀವು ಅಧಿಕಾರದಲ್ಲಿ ಮುಂದುವರಿಯುವುದು ಎಷ್ಟು ಸರಿ ಎಂದು ಛೀಮಾರಿ ಹಾಕಿತ್ತು.
ಇದರಿಂದ ಮುಜುಗರಕ್ಕೀಡಾದ ಚಾಂಡಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ಚರ್ಚಿಸಿ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ. ಆರೋಪಮುಕ್ತನಾಗಿಯೇ ಮರಳುತ್ತೇನೆ ಎಂದು ಚಾಂಡಿ ತಿಳಿಸಿದ್ದಾರೆ.
ಸಂಬಂಧಿಕರಿಗೆ ಹುದ್ದೆ ನೀಡಿದ್ದ ಜಯರಾಜನ್, ಲೈಂಗಿಕ ಹಗರಣದಲ್ಲಿ ಎ.ಕೆ.ಶಶೀಂದ್ರನ್ ಹಿಂದೆ ರಾಜೀನಾಮೆ ನೀಡಿದ್ದರು. ಈಗ ಸಾರಿಗೆ ಸಚಿವ ಥಾಮಸ್ ಚಾಂಡಿ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡುವ ಮೂಲಕ ಕಮ್ಯುನಿಸ್ಟ್ ಸರ್ಕಾರದ ಮೂರನೇ ವಿಕೆಟ್ ಪತನ ಎಂಬ ಕುಖ್ಯಾತಿಗೆ ಭಾಜನರಾಗಿದ್ದಾರೆ.
Leave A Reply