ಪರಿಸರ ರಕ್ಷಣೆಗೆ ಕೇಜ್ರಿವಾಲ್ ಸರ್ಕಾರ ಪಡೆದಿದ್ದು 787 ಕೋಟಿ ರುಪಾಯಿ, ಖರ್ಚು ಮಾಡಿದ್ದು ಬರೀ 93 ಲಕ್ಷ!
ದೆಹಲಿ: ಯಾವಾಗ ಹಸಿರು ನ್ಯಾಯಾಧಿಕರಣ ದೆಹಲಿಯಲ್ಲಿ ವಾಯುಮಾಲಿನ್ಯ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಘೋಷಣೆ ಮಾಡಿತೋ, ಅಲ್ಲಿಂದ ದಿಢೀರನೆ ಎಚ್ಚೆತ್ತುಕೊಂಡವರ ಹೆಸರು ಅರವಿಂದ್ ಕೇಜ್ರಿವಾಲ್.
ಹೌದು, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಘೋಷಣೆಯಾದ ಬಳಿಕ ಕೇಜ್ರಿವಾಲ್, ಹರಿಯಾಣ, ಪಂಜಾಬ್ ಗಳಲ್ಲಿ ರೈತರು ಭತ್ತದ ತ್ಯಾಜ್ಯ ಸುಡಬಾರದು ಎಂದರು. ಎರಡೂ ರಾಜ್ಯಗಳ ಮುಖ್ಯಮಂತ್ರಿ ಜತೆ ಮಾತನಾಡುವೆ ಎಂದು ಪರಿಸರ ಕಾಳಜಿ ತೋರಿಸಿದರು.
ಆದರೆ, ದೆಹಲಿ ಸರ್ಕಾರ ಪರಿಸರ ರಕ್ಷಣೆಗೆ ಪ್ರಸಕ್ತ ವರ್ಷದಲ್ಲಿ ಜನರಿಂದ ಪಡೆದ ತೆರಿಗೆ ಹಣ 787 ಕೋಟಿ ರೂಪಾಯಿ. ಪರಿಸರ ರಕ್ಷಣೆಗೆ ಇಷ್ಟೆಲ್ಲ ಮಾತನಾಡುವ ಸರ್ಕಾರ ಖರ್ಚು ಮಾಡಿದ್ದು ಮಾತ್ರ ಬರೀ 93 ಲಕ್ಷ ರೂಪಾಯಿ ಎಂದರೆ ನಂಬಲೇಬೇಕು.
ಸಂಜೀವ್ ಜೈನ್ ಎಂಬ ಆರ್ ಟಿಐ ಕಾರ್ಯಕರ್ತ ಮಾಹಿತಿ ಹಕ್ಕು ಕಾಯಿದೆ ಅನ್ವಯ ಪಡೆದ ದಾಖಲೆ ಪ್ರಕಾರ, ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ 2015ರಲ್ಲಿ 50 ಕೋಟಿ ರುಪಾಯಿ, 2016ರಲ್ಲಿ 387 ಹಾಗೂ ಪ್ರಸಕ್ತ ವರ್ಷದ ಜನವರಿಯಿಂದ ಸೆ.1ರವರೆಗೆ ಬರೋಬ್ಬರಿ 787 ಕೋಟಿ ರೂಪಾಯಿ ಪರಿಸರ ಶುಲ್ಕ ಸಂಗ್ರಹಿಸಿದೆ. ಆದರೆ ಅದರಲ್ಲಿ ಖರ್ಚು ಮಾಡಿದ್ದು ಮಾತ್ರ 93 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.
2007ರಲ್ಲಿ ಪರಿಸರ ರಕ್ಷಣೆಗೆ ಅಂದಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಪರಿಸರ ಶುಲ್ಕ ತೆರಿಗೆ ಜಾರಿಗೊಳಿಸಿದ್ದರು. ಆದರೆ ಆಡಳಿತಕ್ಕೆ ಬಂದು ಮೂರು ವರ್ಷವಾದರೂ ಕೇಜ್ರಿವಾಲ್ ಸರ್ಕಾರ ತೆರಿಗೆ ಹಣ ಖರ್ಚು ಮಾಡದೇ ಬರೀ, ಮಾತಿನಲ್ಲೇ ಪರಿಸರ ರಕ್ಷಣೆ ಮಾಡುತ್ತಿರುವ ಪರಿಣಾಮವೇ ದೆಹಲಿಯಲ್ಲಿ ವಾಯುಮಾಲಿನ್ಯ ತುರ್ತು ಪರಿಸ್ಥಿತಿ ಎದುರಾಗಿದೆ ಎಂಬ ಮಾತು ಕೇಳಿಬರುತ್ತಿವೆ.
Leave A Reply