ಪದ್ಮಾವತಿ ಚಿತ್ರ ನಿಷೇಧಿಸಲು ಆಗ್ರಹಿಸಿ ಡಿ.1ರಂದು ಭಾರತ ಬಂದ್!
ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಬಾಲಿವುಡ್ ಚಿತ್ರ ಬಿಡುಗಡೆಗೆ ರಜಪೂತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶ್ರೀ ರಾಷ್ಟ್ರೀಯ ರಜಪೂತ್ ಕರಣಿ ಸಂಘಟನೆ ಡಿಸೆಂಬರ್ 1ರಂದು ಭಾರತ ಬಂದ್ ಗೆ ಕರೆ ನೀಡಿದೆ.
ಹಿಂದೂ ಸಂಘಟನೆ ಅಥವಾ ರಜಪೂತ ಕರಣಿ ಜತೆಗೆ ಮುಸ್ಲಿಮರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಚಿತ್ರದ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. ಹಾಗಾಗಿ ಈ ಚಿತ್ರವನ್ನು ನಿಷೇಧಿಸಬೇಕು ಎಂದು ರಜಪೂತ್ ಕರಣಿ ಸಂಸ್ಥಾಪಕ ಲೋಕೇಂದ್ರ ಕಲ್ವಿ ಹೇಳಿದ್ದಾರೆ.
ಅಲ್ಲದೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು. ಸಿನಿಮಾಟೋಗ್ರಫಿ ಕಾಯಿದೆಯನ್ವಯ ಮೂರು ತಿಂಗಳು ಚಿತ್ರ ಬಿಡುಗಡೆ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲವುದ್ದೀನ್ ಖಿಲ್ಜಿ ಹಾಗೂ ರಾಣಿ ಪದ್ಮಿನಿ ನಡುವೆ ಆತ್ಮೀಯ ಚಿತ್ರಗಳನ್ನು ಚಿತ್ರಿಸಿದ್ದು, ಇತಿಹಾಸ ತಿರುಚಲಾಗಿದೆ ಎಂದು ರಜಪೂತರ ಆರೋಪವಾಗಿದೆ. ಸಿನಿಮಾ ಡಿ.1ರಂದು ಬಿಡುಗಡೆಯಾಗಲಿದ್ದು, ಅದೇ ದಿನ ಭಾರತ ಬಂದ್ ಗೆ ಕರೆ ನೀಡಲಾಗಿದೆ.
ಆದಾಗ್ಯೂ, ಸಂಜಯ್ ಲೀಲಾ ಬನ್ಸಾಲಿ ಇತ್ತೀಚಿಗೆ ವಿವಾದಾತ್ಮಕ, ಅದರಲ್ಲೂ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಚಿತ್ರಗಳನ್ನೇ ನಿರ್ದೇಶಿಸುತ್ತಿದ್ದು, ಅವರ ಬಾಜೀರಾವ್ ಮಸ್ತಾನಿ ಬಿಡುಗಡೆ ವೇಳೆಯೂ ಆಕ್ಷೇಪ ಕೇಳಿಬಂದಿದ್ದವು.
Leave A Reply