ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಬಹುತೇಕ ಮುಸ್ಲಿಮರ ವಿರೋಧವಿಲ್ಲ: ಶ್ರೀ ಶ್ರೀ ರವಿಶಂಕರ್ ಗುರೂಜಿ
ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಬಹುತೇಕ ಮುಸ್ಲಿಮರ ಬೆಂಬಲವಿದ್ದು, ವಿರೋಧಿಸುತ್ತಿಲ್ಲ ಎಂದು ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.
ರಾಮಮಂದಿರ-ಬಾಬ್ರಿ ಮಸೀದಿ ನಿರ್ಮಾಣದ ಕುರಿತ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಲು ಉತ್ತರ ಪ್ರದೇಶಕ್ಕೆ ತೆರಳಿರುವ ಗುರೂಜಿ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ್ದಾರೆ.
ಈ ಮಾತು ಕೆಲವು ಮುಸ್ಲಿಮರು ಒಪ್ಪುವುದಿಲ್ಲ ನಿಜ. ಆದರೆ ವಾಸ್ತವದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಅಯೋಧ್ಯೆಯ ಬಹತೇಕ ಮುಸ್ಲಿಮರು ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದಿದ್ದಾರೆ.
ಖಂಡಿತವಾಗಿಯೂ ವಿವಾದ ಬಗೆಹರಿಯದ ಕಾಲವಿತ್ತು. ಈಗಲೂ ಹಾಗೆಯೇ ಬಿಂಬಿಸಲಾಗುತ್ತಿದೆ. ಆದರೆ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಯುವಕರು ಹಾಗೂ ಮುಖಂಡರು ಮನಸ್ಸು ಮಾಡಿದರೆ ವಿವಾದವನ್ನು ಸರಳವಾಗಿ ಬಗೆಹರಿಸಬಹುದು ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಕಾರಾತ್ಮಕ ವಾತಾವರಣವಿದೆ. ಜನ ವಿವಾದದಿಂದ ಮುಕ್ತಿ ಹೊಂದಲು ಬಯಸುತ್ತಿದ್ದಾರೆ. ಆದರೆ ವಿವಾದ ಬಗೆಹರಿಸುವುದು ಅಷ್ಟು ಸರಳ ಅಲ್ಲ ಎಂಬುದೂ ಗೊತ್ತಿದೆ. ಆದರೆ, ಎಲ್ಲರೊಂದಿಗೂ ಮಾತನಾಡಲು ನನಗೆ ಅವಕಾಶ ನೀಡಲಿ. ಆದಷ್ಟು ಬೇಗ ಸಮಸ್ಯಗೆ ಇತಿಶ್ರೀ ಹಾಡುವೆ ಎಂದು ಗುರೂಜಿ ಹೇಳಿದ್ದಾರೆ.
ರಾಮಮಂದಿರ-ಬಾಬ್ರಿ ಮಸೀದಿ ವಿಚಾರದಲ್ಲಿ ಹಿಂದೂ ಮುಸ್ಲಿಮರ ನಡುವೆ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸುವುದಾಗಿ ರವಿಶಂಕರ್ ಗುರೂಜಿ ಹೇಳಿದ್ದಾಗ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬೇಡ ಎಂಬ ಮಾತನ್ನಾಡಿದ್ದರು. ಆದರೆ ಗುರೂಜಿ ಉತ್ತರಪ್ರದೇಶಕ್ಕೇ ತೆರಳಿದ್ದು, ವಿವಾದ ಬಗೆಹರಿಸಲು ಹಾಗೂ ರಾಮಮಂದಿರ ನಿರ್ಮಿಸಲು ಮುಸ್ಲಿಮರ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಸಕಾರಾತ್ಮಕ ಭಾವನೆ ಮೂಡಿಸಿದೆ. ಶೀಘ್ರವೇ ಅಯೋಧ್ಯೆಯಲ್ಲಿ ಶಾಂತಿಯುತವಾಗಿ ರಾಮಮಂದಿರ ನಿರ್ಮಾಣವಾಗಲಿ ಎಂಬುದೇ ಕೋಟ್ಯಂತರ ಹಿಂದೂಗಳ ಆಶಯವಾಗಿದೆ.
Leave A Reply