ಚೀನಾದ ಸಾಲ ನೀಡುವ ಆಫರ್ ತಿರಸ್ಕರಿಸಿ ಮಿತ್ರನಿಗೇ ಟಾಂಗ್ ನೀಡಿದ ಪಾಕಿಸ್ತಾನ
ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಹಣಕಾಸು ನೆರವು, ಯೋಜನೆ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಸ್ನೇಹ ಗಳಿಸಿದ್ದ ಚೀನಾಕ್ಕೆ ಪಾಕಿಸ್ತಾನ ಟಾಂಗ್ ನೀಡಿದ್ದು, 14 ಶತಕೋಟಿ ಡಾಲರ್ ಹಣ ಸಾಲ ನೀಡುವುದಾಗಿ ಚೀನಾ ನೀಡಿದ ಆಫರ್ ಪಾಕಿಸ್ತಾನ ತಿರಸ್ಕರಿಸಿದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಮಹತ್ತರ ಯೋಜನೆ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಡೈಮರ್ ಭಾಷಾ ಅಣೆಕಟ್ಟು ನಿರ್ಮಿಸಲು 14 ಶತಕೋಟಿ ಡಾಲರ್ ಹಣ ನೀಡಲು ಚೀನಾ ಮುಂದೆ ಬಂದಿತ್ತು. ಆದರೆ ಸ್ವತಃ ಆಣೆಕಟ್ಟು ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದ ಪಾಕಿಸ್ತಾನ, ಸ್ನೇಹಿತನಿಗೇ ಟಾಂಗ್ ನೀಡುವ ಮೂಲಕ ತನ್ನ ನರಿಬುದ್ಧಿ ಪ್ರದರ್ಶಿಸಿದೆ. ಇದರಿಂದ ಚೀನಾ ಪಾಡು ಬಾಲ ಸುಟ್ಟ ನರಿಯಂತಾಗಿದೆ.
ಈ ಪಾಕ್ ಆಕ್ರಮಿತ ಕಾಶ್ಮೀರ ವಿವಾದಿತ ಪ್ರದೇಶದಲ್ಲಿ ಯಾವುದೇ ಯೋಜನೆಗೆ ಸಾಲ ನೀಡಲು ಅಂತಾರಾಷ್ಟ್ರೀಯ ಸಂಸ್ಥೆ ಹಾಗೂ ಬ್ಯಾಂಕುಗಳು ಸಾಲ ನೀಡಲು ಒಪ್ಪಿಗೆ ಸೂಚಿಸುತ್ತಿಲ್ಲ. ಭಾರತವೂ ಏಷ್ಯನ್ ಅಭಿವೃದ್ಧಿ ಬ್ಯಾಂಕಿನಿಂದ ಸಾಲ ತೆಗೆದು ಡ್ಯಾಂ ನಿರ್ಮಿಸಲು ಮುಂದಾಗಿತ್ತಾದರೂ ಪ್ರಯತ್ನ ವಿಫಲವಾಗಿತ್ತು.
ಆದರೆ ಚೀನಾ, ಹಣದ ನೆರವಿನ ಮೂಲಕ ಪಾಕಿಸ್ತಾನವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ದೃಷ್ಟಿಯಿಂದ 14 ಶತಕೋಟಿ ಡಾಲರ್ ನೀಡಲು ಮುಂದಾಗಿತ್ತು. ಆದರೆ 60 ಶತಕೋಟಿ ಡಾಲರ್ ವೆಚ್ಚದ ಸಿಪಿಇಸಿ ಯೋಜನೆಯಿಂದ ಡ್ಯಾಂ ಕಾಮಗಾರಿ ತಪ್ಪಿಸಲು ಪಾಕಿಸ್ತಾನ ಈ ಕುತಂತ್ರ ಬುದ್ಧಿ ಅನುಸರಿಸಿದೆ ಎಂದೇ ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಚೀನಾದ ತಂತ್ರಕ್ಕೆ ಪಾಕಿಸ್ತಾನ ಕುತಂತ್ರದ ಅಸ್ತ್ರ ಬಳಸಿದ್ದು, ಪಾಕಿಸ್ತಾನ ಯಾವ ರಾಷ್ಟ್ರಕ್ಕೂ ನಿಷ್ಠೆಯಿಂದ ಇರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದು ಚೀನಾಕ್ಕೂ ಒಂದು ಪಾಠವಾಗಿದೆ.
Leave A Reply