ತಾಯಿ ಕಣ್ಣೀರಿಗೆ ಕರಗಿತು ಕರುಳು, ಉಗ್ರ ಸಂಘಟನೆ ತೊರೆದು ಬಂದ ಮಗ!
ಶ್ರೀನಗರ: ಸಾಮಾಜಿಕ ಜಾಲತಾಣದಲ್ಲಿ ತಾಯಿ ಕಣ್ಣೀರಿಡುವುದನ್ನು ನೋಡಿದ ಮಗನ ಮನಸ್ಸು ಕರಗಿದ್ದು, ಕಳೆದ ತಿಂಗಳು ಲಷ್ಕರೆ ತಯ್ಬಾ ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರದ ಯುವಕ ಪೊಲೀಸರಿಗೆ ಶರಣಾಗಿದ್ದಾನೆ.
ಅನಂತ್ ನಾಗ್ ಸ್ಥಳೀಯ ಫುಟ್ ಬಾಲ್ ತಂಡದ ಗೋಲ್ ಕೀಪರ್ ಹಾಗೂ ಕಾಲೇಜು ವಿದ್ಯಾರ್ಥಿಯಾಗಿದ್ದ ಮಜೀದ್ ಇರ್ಷಾದ್ ಖಾನ್, ತಾಯಿ ಹಾಗೂ ಆತನ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಹಾಗೂ ವಿಡಿಯೋ ನೋಡಿ ವಾಪಸಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಜೀದ್ ಇರ್ಷಾದ್ ಖಾನ್ ನಡೆಯನ್ನು ನಾವು ಸ್ವಾಗತಿಸುತ್ತೇವೆ. ಶೀಘ್ರದಲ್ಲೇ ಆತನೂ ಸಾಮಾನ್ಯರಂತೆ ಜೀವನ ನಡೆಸುವುದನ್ನು ನೋಡಲಿದ್ದೇವೆ ಎಂದು ಜಮ್ಮು ಕಾಶ್ಮೀರ ಡಿಐಜಿ ಮುನೀರ್ ಖಾನ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿರುವ ಭದ್ರತಾ ಸಿಬಿರಕ್ಕೆ ಯುದ್ಧ ಸಾಮಗ್ರಿ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿದ ಇರ್ಷಾದ್ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಹೇಳಿದ್ದಾರೆ.
ಮಜೀದ್ ಸ್ನೇಹಿತನೊಬ್ಬ ಲಷ್ಕರೆ ತೊಯ್ಬಾ ಸಂಘಟನೆ ಸೇರಿದ್ದು, ಆತನನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದರು. ಇದರಿಂದ ಕುಪಿತನಾಗಿದ್ದ ಮಜೀದ್ ಕಳೆದ ತಿಂಗಳು ಲಷ್ಕರೆ ತಯ್ಯಬಾ ಸೇರಿದ್ದ ಎಂದು ತಿಳಿದುಬಂದಿದೆ.
ಚಿತ್ರಕೃಪೆ-ಎಎನ್ಐ
Leave A Reply