ಯೋಧರ ಭರ್ಜರಿ ಬೇಟೆ, 26/11ರ ದಾಳಿ ಮಾಸ್ಟರ್ ಮೈಂಡ್ ಸಂಬಂಧಿ ಸೇರಿ ಆರು ಉಗ್ರರು ಖಲಾಸ್!
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಶುಕ್ರವಾರವಷ್ಟೇ ಉಗ್ರರು ದಾಳಿ ಮಾಡಿ ಭಾರತದ ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಿರುವ ಬೆನ್ನಲ್ಲೇ, ಭಾರತೀಯ ಸೈನಿಕರು ಮುಯ್ಯಿ ತೀರಿಸಿಕೊಂಡಿದ್ದು 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜೆಕುರ್ ರೆಹಮಾನ್ ಲಖ್ವಿ ಸಂಬಂಧಿ ಸೇರಿ ಬರೋಬ್ಬರಿ ಆರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಚಂಡೆರ್ಗೀರ್ ಗ್ರಾಮದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂದಿ ಆರು ಉಗ್ರರನ್ನು ಎನ್ ಕೌಂಟರ್ ಮಾಡಿದ್ದಾರೆ. ಆದಾಗ್ಯೂ, ಗುಂಡಿನ ದಾಳಿಯಲ್ಲಿ ವಾಯುಪಡೆಯ ಗರುಡ್ ಕಮಾಂಡೋ ಒಬ್ಬರು ಹುತಾತ್ಮರಾಗಿದ್ದಾರೆ.
ಆರೂ ಉಗ್ರರು ಪಾಕಿಸ್ತಾನದವರಾಗಿದ್ದು, ಅವರಲ್ಲಿ 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜೆಕುರ್ ರೆಹಮಾನ್ ಲಖ್ವಿ ಸಂಬಂಧಿ ಒವೈದ್ ನನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ ಲಷ್ಕರೆ ತಯ್ಬಾದ ಜರ್ಗಾಮ್ ಮತ್ತು ಮೆಹ್ಮೂದ್ ಎಂಬ ಇಬ್ಬರು ಉಗ್ರರು ಸಹ ಸೇರಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಶೇಷ್ ಪೌಲ್ ವೇದ್ ಸ್ಪಷ್ಟಪಡಿಸಿದ್ದಾರೆ.
ವಿಶೇಷ ಕಾರ್ಯಾಚರಣೆ ತಂಡ (ಎಸ್ಒಜಿ), ರಾಷ್ಟ್ರೀಯ ರೈಫೆಲ್ಸ್ (ಆರ್ ಆರ್), ಕೇಂದ್ರೀಯ ಸಶಸ್ತ್ರ ಮೀಸಲು ಪಡೆ (ಸಿಆರ್ ಪಿಎಫ್) ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
Leave A Reply