ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರಿಂದ ಗಾಯಗೊಂಡವರಿಗೆ ನೌಕರಿ ನೀಡಲು ಮುಂದಾದ ರಾಜ್ಯ ಸರ್ಕಾರ!
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಬದಲಾಗುತ್ತಿದೆ ಎಂದು ಭದ್ರತಾ ಸಿಬ್ಬಂದಿ ಹಿರಿಯ ಅಧಿಕಾರಿಗಳು ಹೇಳಿರುವ ಬೆನ್ನಲ್ಲೇ ರಾಜ್ಯ ಸರಕಾರ ದಿಟ್ಟ ನಿರ್ಧಾರವೊಂದು ಕೈಗೊಂಡಿದ್ದು, ಕಲ್ಲು ತೂರಾಟಗಾರರಿಂದ ಗಾಯಗೊಂಡವರಿಗೆ ಸರಕಾರಿ ನೌಕರಿ ನೀಡಲು ಮುಂದಾಗಿದೆ.
ರಾಜ್ಯ ಮಾನವ ಹಕ್ಕುಗಳ ಆಯೋಗದ ವರದಿ ಪ್ರಕಾರ, 2016ರ ಜುಲೈ 8ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವನಿ ಹತ್ಯೆಯಾದ ಬಳಿಕ ಕಲ್ಲು ತೂರಾಟಗಾರರ ಏಟಿಗೆ 2,524 ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದರಲ್ಲಿ 59 ಮಹಿಳೆಯರು ಸೇರಿ 1,725 ಸಂತ್ರಸ್ತರ ಪಟ್ಟಿಯನ್ನು ಸರ್ಕಾರ ಪರಿಷ್ಕರಿಸಿ ಆಯೋಗಕ್ಕೆ ನೀಡಿದ್ದು, ಇವರಲ್ಲಿ ಕಣ್ಣು ಕಳೆದುಕೊಂಡವರು ಅಥವಾ ಭಾಗಶಃ ಅಂಗವಿಕಲರಾದವರಿಗೆ ಸರ್ಕಾರಿ ನೌಕರಿ ನೀಡುವುದಾಗಿ ತಿಳಿಸಿದೆ.
ಅಲ್ಲದೆ, ಇವರಲ್ಲಿ ಸಂಪೂರ್ಣವಾಗಿ ಕಣ್ಣು ಕಳೆದುಕೊಂಡ 12 ಸಂತ್ರಸ್ತರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ತೀವ್ರ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಧನ ಸಹ ಸರಕಾರ ಘೋಷಣೆ ಮಾಡಿದೆ.
ಶೋಪಿಯಾನ್, ಕುಲ್ಗಾಮ್ ಸೇರಿ ಕಲ್ಲು ತೂರಾಟ ಪ್ರಕರಣ ಜಾಸ್ತಿ ನಡೆಯುವ ಕಾಶ್ಮೀರದ ಹತ್ತು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಅಂಕಿ-ಅಂಶ ಕಲೆಹಾಕಲಾಗಿದೆ. ಬಂಡಿಪೋರಾ ಮತ್ತು ಬುದ್ಗಾಮ್ ಜಿಲ್ಲೆಗಳ ಅಂಕಿ-ಅಂಶ ಪಡೆಯುವುದು ಬಾಕಿ ಇದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ನಿವೃತ್ತ ನ್ಯಾಯಮೂರ್ತಿ ಬಿಲಾಲ್ ನಜ್ಕಿ ತಿಳಿಸಿದ್ದಾರೆ.
Leave A Reply