ಆಧಾರ್ ಕಾರ್ಡ್ ಮೇಳಾ ಕುಂಭದ್ರೋಣ ಮಳೆಯಂತೆ ಭರ್ಜರಿಯಾಗಿ ನಡೆಯಿತು, ನೆನೆದ ಖುಷಿ ನಮಗೆ!

ಒಂದು ಯಶಸ್ವಿ ಕಾರ್ಯಕ್ರಮ ಮುಗಿದ ತೃಪ್ತಿಯಲ್ಲಿದ್ದೇನೆ. ನಿರೀಕ್ಷೆಗಿಂತಲೂ ಹೆಚ್ಚಿನ ಜನ ಆಗಮಿಸಿದಾಗ ಸಣ್ಣಪುಟ್ಟ ವ್ಯತ್ಯಾಸಗಳಾಗಿರುವುದು ಬಿಟ್ಟರೆ ಕಾರ್ಯಕ್ರಮ ಸಾಗರೋಪಾದಿಯಲ್ಲಿ ನಡೆಯಿತಲ್ಲ, ಅದಕ್ಕಿಂತ ಖುಷಿ ಇದೆಯಾ? ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದೆ. ಟ್ರಸ್ಟ್ ನ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಅವರು ದಿನನಿತ್ಯ ಹಲವು ಕಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಅವರಿಗೆ ಜನಸಾಮಾನ್ಯರಿಂದ ಎದುರಾಗುತ್ತಿದ್ದ ಸಾಮಾನ್ಯ ಪ್ರಶ್ನೆ ಎಂದರೆ “ಆಧಾರ್ ಕಾರ್ಡ್ ಇಲ್ಲ ಅಥವಾ ತಿದ್ದುಪಡಿ ಮಾಡಬೇಕು, ಏನು ಮಾಡಬೇಕು?”.
ಅದನ್ನು ಅವರು ನಮ್ಮ ಸೇವಾಂಜಲಿಯ ಮಿಟೀಂಗ್ ನಲ್ಲಿ ಇಟ್ಟಾಗ ನಮ್ಮಲ್ಲಿ ಮೂಡಿಬಂದ ಒಮ್ಮತದ ಅಭಿಪ್ರಾಯ “ನಾವೇ ಒಂದು ಆಧಾರ್ ಮೇಳ ಮಾಡೋಣ”. ಸವಾಲು ಅಷ್ಟು ಸುಲಭದ್ದು ಎಂದು ನನಗೆ ಅನಿಸಿರಲಿಲ್ಲ. ಯಾಕೆಂದರೆ ಸಾವಿರ ಮಂದಿಗೆ ಒಳ್ಳೆಯದು ಮಾಡಲು ಹೋಗಿ ನಾಲ್ಕು ಮಂದಿಗೆ ತೊಂದರೆ ಆದರೆ ಅದೇ ದೊಡ್ಡ ವಿಷಯವಾಗಬಾರದಲ್ಲ. ಸರಕಾರಿ ವ್ಯವಸ್ಥೆಗಳೇ ಎಲ್ಲವೂ ಇದ್ದು ಇಂತಹ ಮೇಳವನ್ನು ನಡೆಸುವಾಗ ಎಡವುತ್ತವೆ. ಆದರೂ ಮಾಡಬೇಕು ಎಂದು ನಿರ್ಧರಿಸಿದ ನಂತರ ಹಿಂದೆ ಸರಿಯುವ ಪ್ರಶ್ನೆನೆ ಇರಲಿಲ್ಲ. ಆಧಾರ್ ಕಾರ್ಡ್ ಮಾಡುವ ಕೇಂದ್ರದ ಸಂಸ್ಥೆ ಸಿಎಸ್ ಸಿಯನ್ನು ಸಂಪರ್ಕಿಸಿದೆವು. ಅವರಿಂದ ಸಹಕಾರ ಸಿಕ್ಕಿತು. ಪ್ರಾರಂಭದಲ್ಲಿಯೇ ಸರಿಯಾಗಿ ಪ್ಲಾನ್ ಮಾಡಿದ್ದೆವು. ಟೋಕನ್ ಕೊಡುವುದಕ್ಕಾಗಿಯೇ ಭರ್ಥಿ ನಾಲ್ಕು ದಿನ ತೆಗೆದಿಟ್ಟೆವು. ಈ ನಾಲ್ಕು ದಿನ ಕೂಡ ಬೆಳಿಗ್ಗೆ 8.30 ರಿಂದ ರಾತ್ರಿ 8.30 ರ ತನಕ ಪಿವಿಎಸ್ ಕಲಾಕುಂಜದ ಸನಿಹದಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ನಮ್ಮ ಯುವಕರು ಇದ್ದರು. ನಾನು ಕೂಡ ಇದ್ದೆ. ಟೋಕನ್ ಕೊಡಲಾಗುತ್ತದೆ ಎಂದು ಬ್ಯಾನರ್ ಮಾಡಿ ಅಲ್ಲಲ್ಲಿ ಹಾಕಿದ್ದ ಕಾರಣ ನಾಲ್ಕು ದಿನವೂ ಜನರು ಬಂದು ಟೋಕನ್ ಪಡೆದುಕೊಂಡರು. ಅದರ ನಂತರ 17, 18, 19 ಮೇಳಾ ಕ್ರಮಬದ್ಧವಾಗಿ ನಡೆಯಿತು. ಮೂರು ದಿನದಲ್ಲಿ ಸುಮಾರು 1800 ನಾಗರಿಕರು ಇದರಲ್ಲಿ ಭಾಗವಹಿಸಿದ್ದರು. ಹಲವರು ಹೊಸ ಆಧಾರ್ ಕಾರ್ಡ್ ಮಾಡಿಸಿಕೊಂಡರೆ ಉಳಿದವರು ತಮ್ಮ ಆಧಾರ್ ಕಾರ್ಡ್ ನ ತಪ್ಪುಗಳನ್ನು ಸರಿಪಡಿಸಿ ನೆಮ್ಮದಿ ಪಡೆದುಕೊಂಡರು. ಕೆಲವರು ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಂಡರು. ಒಟ್ಟಿನಲ್ಲಿ ಒಂದು ಯೋಜನೆ ಯೋಜಿತವಾಗಿ ನಡೆಯಿತು. ಅನೇಕರು ತಮ್ಮ ಸಂತೋಷವನ್ನು ನಮ್ಮ ಜೊತೆ ಹಂಚಿಕೊಂಡು ಒಳ್ಳೆಯ ಕೆಲಸ ಮಾಡುತ್ತಿದ್ದಿರಿ ಎಂದು ಬೆನ್ನು ತಟ್ಟಿದರು.
ಒಂದಿಷ್ಟು ಜನ ಟೋಕನ್ ಪಡೆದುಕೊಳ್ಳದೇ ನೇರವಾಗಿ ಬಂದಿದ್ದರು. ದೂರದಿಂದ ಬಂದು ವಿನಂತಿ ಮಾಡಿಕೊಂಡಾಗ ನಮಗೆ ಒಂದು ರೀತಿಯಲ್ಲಿ ಉಭಯ ಸಂಕಟ. ಒಂದು ಕಡೆ ಅವರ ನಿರೀಕ್ಷೆ ಪೂರೈಸೋಣ ಎನ್ನುವ ಆಸೆ ಮತ್ತೊಂದೆಡೆ ಈಗ ಟೋಕನ್ ಕೊಟ್ಟವರಿಗೆ ಸರಿಯಾಗಿ ಸೇವೆ ಕೊಡಲಾಗದೇ ಬಿಡುತ್ತೇವಾ ಎನ್ನುವ ಆತಂಕ. ಹಾಗೆ ಬಂದವರ ಫೋನ್ ನಂಬ್ರ ತೆಗೆದುಕೊಂಡು ನಾವೇ ಫೋನ್ ಮಾಡಿ ಮುಂದಿನ ದಿನಗಳಲ್ಲಿ ಕರೆಯುತ್ತೇವೆ ಎಂದು ಹೇಳಿ ಕಳುಹಿಸಿದ್ದೇವೆ. ಕೆಲವರಿಗೆ ಬೆಳಿಗ್ಗೆ 8.30 ಕ್ಕೆ ಅಪಾಯಿಂಟ್ ಮೆಂಟ್ ಕೊಟ್ಟಿದ್ದರೂ ಅವರದ್ದು ಮುಗಿಯುವಾಗ 9.30 ಆಗಿದೆ. ಒಂದು ಗಂಟೆ ಲೇಟಾಯಿತು ಎಂದು ಅವರಲ್ಲಿ ಕೆಲವರು ಬೇಸರ ಪಟ್ಟುಕೊಂಡದ್ದು ಕೂಡ ನಡೆದಿದೆ. ಆದರೆ ಅದು ನಮ್ಮ ತಪ್ಪಲ್ಲ. ಈ ಆಧಾರ್ ಕಾರ್ಡ್ ಯಂತ್ರಗಳು ಬೆಳಿಗ್ಗೆ ಮೋಡಕಟ್ಟಿದ ವಾತಾವರಣ ಇದ್ದಾಗ ಕೆಲಸ ಮಾಡಲು ಕೇಳುವುದಿಲ್ಲ. ಅದೇಗೆಂದರೆ ನಾವು ಅದಕ್ಕೆ ಕೊಡುವ ಆದೇಶವನ್ನು ಅದು ಸ್ವೀಕರಿಸಿ ಅದನ್ನು ಬಾಹ್ಯಾಕಾಶಕ್ಕೆ ತರಂಗಗಳ ಮೂಲಕ ಕಳುಹಿಸಿ ಅಲ್ಲಿಂದ ಅದು ಸಂದೇಶ ಹೊತ್ತು ನಂತರ ಸಿಸ್ಟಮ್ ಗೆ ಮರಳಬೇಕು. ಮೋಡಗಳು ಇದ್ದರೆ ಸಂದೇಶ ಹೋಗಿ ಬರಲು ಕಷ್ಟವಾಗುತ್ತದೆ. ಆಗ ಅದನ್ನು ನಿರ್ವಹಿಸುವವರೇ ಯಂತ್ರದ ಭಾಗವೊಂದನ್ನು ಕಟ್ಟಡದ ಹೊರಗೆ ತಂದು ಬಿಸಿಲಿಗೆ ಒಡ್ಡಬೇಕು. ಹಾಗೆ ಕಾಲು ಗಂಟೆ ಹಿಡಿದರೆ ಅದು ಸರಿಯಾಗುತ್ತದೆ. ಇಂತಹ ಕೆಲವು ಸಣ್ಣ ಸವಾಲುಗಳು ಇರುತ್ತವೆ.
ಈಗಾಗಲೇ ನಂತರ ಬಂದ ನಾಗರಿಕರ ಫೋನ್ ನಂಬ್ರ ಪಡೆದುಕೊಂಡದ್ದೇ ಮೂರು ಸಾವಿರ ಇದೆ. ಅದನ್ನು ಒಂದೊಂದೇ ಮುಗಿಸಲು ಈಗಲೂ ಒಂದು ಯಂತ್ರ ಅಟಲ್ ಸೇವಾ ಕೇಂದ್ರದಲ್ಲಿ ಸೇವಾನಿರತವಾಗಿದೆ. ಅದು ಮುಗಿದ ನಂತರ ಮತ್ತೆ ಹೊಸಬರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಒಟ್ಟಿನಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಪರವಾಗಿ ಈ ಮೇಳದಲ್ಲಿ ಸಕ್ರಿಯವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನಾವು ಅಭಾರಿಯಾಗಿದ್ದೇವೆ. 85 ಸಾವಿರ ಮಂದಿಯ ಆಧಾರ್ ಸಮಸ್ಯೆ ಸರಿಪಡಿಸುತ್ತೇವೆ ಎನ್ನುವ ಅಹಂ ಇಲ್ಲ. ಒಂದಿಷ್ಟು ಸಾವಿರ ಜನರ ಆಧಾರ್ ಕಾರ್ಡ್ ಗೆ ಒಂದು ಶಾಶ್ವತ ವ್ಯವಸ್ಥೆ ಮಾಡಲು ವೇದವ್ಯಾಸ ಕಾಮತ್ ಈಗಾಗಲೇ ನಿರ್ಧರಿಸಿದ್ದಾರೆ. ಅವರಿಗೆ ಶುಭಕೋರೋಣ!
Leave A Reply