ರಾಷ್ಟ್ರಪತಿ ರಾಮನಾಥ ಕೋವಿಂದ ಅರುಣಾಚಲ ಭೇಟಿ, ಖ್ಯಾತೆ ತೆಗೆದ ಚೀನಾ
ಬೀಜಿಂಗ್: ಅರುಣಾಚಲ ಪ್ರದೇಶಕ್ಕೆ ಭಾನುವಾರ ರಾಷ್ಟ್ರಪತಿ ಕೋವಿಂದ ಭೇಟಿ ನೀಡಿರುವುದಕ್ಕೆ ಚೀನಾ ಕೊಂಕು ತೆಗೆದಿದ್ದು, ಭಾರತ ಗಡಿ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿದೆ ಎಂದು ಚೀನಾ ಸರಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎನ್ನುವ ಚೀನಾ ಸರಕಾರ ಅರುಣಾಚಲ ಪ್ರದೇಶದಲ್ಲಿ ಗಡಿ ವಿವಾದವಿದ್ದು, ಅದನ್ನು ಬಗೆಹರಿಸುವ ಮುನ್ನ ಭಾರತ ಯಾವುದೇ ಮಹತ್ತರ ಚಟುವಟಿಕೆಗಳನ್ನು ಮಾಡಬಾರದು ಎಂದು ಚೀನಾ ವಿದೇಶಾಂಗ ಕಾರ್ಯಾಲಯದ ವಕ್ತಾರ ಲು ಕಾಂಗ್ ಹೇಳಿದ್ದಾರೆ.
ಎರಡು ದೇಶಗಳ ಮಧ್ಯೆ ಇರುವ ವಿವಾದವನ್ನು ಬಗೆಹರಿಸಬೇಕು. ಸೂಕ್ತ ಪರಿಹಾರವನ್ನು ಹುಡಕಬೇಕಿದೆ. ಎರಡು ಕಡೆಯಿಂದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಲು ಮನವಿ ಮಾಡಿದ್ದಾರೆ. ಭಾರತ ನಮ್ಮ ಮನವಿಯನ್ನು ಅರ್ಥ ಮಾಡಿಕೊಳ್ಳಬೇಕು. ಗಡಿಯಲ್ಲಿ ವಿನಾಕಾರಣ ವಿವಾದ ಸೃಷ್ಟಿಸಬಾರದು. ದೂರದೃಷ್ಟಿಯ ಹಿತಾಸಕ್ತಿ ಕಾಯ್ದುಕೊಳ್ಳಬೇಕು. ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಎಲ್ಲರಿಗೂ ಉತ್ತಮ ಎಂದು ಆಗ್ರಹದ ರೀತಿಯಲ್ಲಿ ಮನವಿ ಮಾಡಿದ್ದಾರೆ.
ಭಾರತ ಯಾವುದೇ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಅರುಣಾಚಲಕ್ಕೆ ಭೇಟಿ ನೀಡಿದ್ದರೂ ಚೀನಾ ಈ ರೀತಿಯ ಪ್ರತಿಕ್ರಿಯೆ ನೀಡುತ್ತದೆ. ಆದರೆ ಈ ಭಾರಿ ರಾಷ್ಟ್ರಪತಿಯವರ ಭೇಟಿಯನ್ನೇ ಪ್ರಶ್ನಿಸಿದೆ. ಚೀನಾ ಆಕ್ಷೇಪವನ್ನು ತಿರಸ್ಕರಿಸಿರುವ ಭಾರತ ‘ಭಾರತದ ಎಲ್ಲ ಪ್ರದೇಶಗಳಿಗೆ ಭೇಟಿ ನೀಡುವ ಸ್ವಾತಂತ್ರ್ಯ ದೇಶದ ಮುಖಂಡರು ಹೊಂದಿದ್ದಾರೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ತಿಳಿಸಿದೆ.
ಭಾರತ ಚೀನಾದೊಂದಿಗೆ 3,488 ಕಿ.ಮೀ . ಗಡಿಯನ್ನು ಹಂಚಿಕೊಂಡಿದೆ. ನವೆಂಬರ್ 6ರಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅರುಣಾಚಲ ಪ್ರದೇಶದಲ್ಲಿ ಚೀನಾ ಗಡಿ ಹತ್ತಿರದ ಸೈನಿಕ ನೆಲೆಗೆ ಭೇಟಿ ನೀಡಿದ್ದಾಗಲೂ ಚೀನಾ ಸರಕಾರ ಆಕ್ಷೇಪ ವ್ಯಕ್ತಪಡಿಸಿತ್ತು.
Leave A Reply