ಹಿಂದೂ ಬಡ ಬಾಲಕಿಯರ ಮತಾಂತರಗೊಳಿಸುತ್ತಿದ್ದ 9 ಆರೋಪಿಗಳ ಬಂಧನ
ಹೈದರಾಬಾದ್: ಆಂಧ್ರಪ್ರದೇಶ-ತೆಲಂಗಾಣದಲ್ಲಿ ಹಿಂದೂ ಬಾಲಕಿಯರನ್ನು ಇಸ್ಲಾಂಗೆ ಮತಾಂತರಗೊಳಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ರಚಕೊಂಡ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ.
ಅನಾಥಾಶ್ರಮದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೇವೆ, ಆಹಾರ ಹಾಗೂ ವಸತಿ ನೀಡುತ್ತೇವೆ ಎಂದು ತೆಲಂಗಾಣಕ್ಕೆ ಕರೆದೊಯ್ದು ಬಾಲಕಿಯರನ್ನು ಇಸ್ಲಾಂಗೆ ಮತಾಂತರಗೊಳಿಸುತ್ತಿದ್ದರು ಎಂದು ತಿಳಿದುಬಂದಿದೆ.
ಜಿಲ್ಲಾ ಮಕ್ಕಳ ಕಲ್ಯಾಣ ಆಯೋಗದ 7 ಮಕ್ಕಳು ಸೇರಿ ಒಟ್ಟು 14 ಬಾಲಕಿಯರನ್ನು ಪೊಲೀಸರು ರಕ್ಷಿಸಿದ್ದು, ಅವರೆಲ್ಲರೂ 4-14 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮತಾಂತರಗೊಳಿಸುವ ತಂಡದ ನಾಯಕ ಮೊಹಮ್ಮದ್ ಸಿದ್ದಿಕಿ ಸೇರಿ ಒಂಬತ್ತು ಜನರನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.
ತೆಲಂಗಾಣದ ಭದ್ರಾಚಲಂ, ಮೆಹಬೂಬ್ ನಗರ, ಖಮ್ಮಮ್ ಹಾಗೂ ವರಾಂಗಲ್ ಜಿಲ್ಲೆಗಳ ಬುಡಕಟ್ಟು ಪ್ರದೇಶಗಳ ಅನಾಥ ಮಕ್ಕಳೇ ಆರೋಪಿಗಳ ಟಾರ್ಗೆಟ್ ಅಗಿದ್ದು, ಅವರನ್ನು ಕರೆದೊಯ್ದು ಇಸ್ಲಾಂಗೆ ಮತಾಂತರಗೊಳಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 153 (ಧರ್ಮದ ಹೆಸರಿನಲ್ಲಿ ಸಮುದಾಯಗಳ ವಿರುದ್ಧ ದ್ವೇಷ ಹುಟ್ಟಿಸುವ ಪ್ರಯತ್ನ), 363 (ಅಪಹರಣ) ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಆದಾಗ್ಯೂ, ಕೇರಳದಲ್ಲಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರಗೊಳಿಸುವ ಪ್ರಕರಣ ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಅನಾಥ ಹಿಂದೂ ಬಾಲಕಿಯರ ಮತಾಂತರ ಪ್ರಕರಣ ಜನರನ್ನು ಆತಂಕಕ್ಕೀಡು ಮಾಡಿದೆ.
Leave A Reply