ನೋಟು ನಿಷೇಧ, ಜಿಎಸ್ಟಿ ಬಳಿಕ ಮೋದಿ ಬಳಸುತ್ತಿರುವ ಮತ್ತೊಂದು ಬ್ರಹ್ಮಾಸ್ತ್ರವಾದರೂ ಯಾವುದು?
ನೋಟು ನಿಷೇಧಗೊಳಿಸಿ ಕಾಳಧನಿಕರ ಹೆಡೆಮುರಿಕಟ್ಟಿದ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಳಿಸಿ ತೆರಿಗೆ ಸುಧಾರಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೀಘ್ರದಲ್ಲೇ ಮತ್ತೊಂದು ದಿಟ್ಟ ನಿರ್ಧಾರ ಕೈಗೊಳ್ಳಲಿದೆ.
ಹೌದು, ಜಿಎಸ್ಟಿ ಮೂಲಕ ಪರೋಕ್ಷ ತೆರಿಗೆ ಸುಧಾರಿಸಿದ ಕೇಂದ್ರ ಸರ್ಕಾರದ ಕಣ್ಣು ಈಗ ನೇರ ತೆರಿಗೆ ಮೇಲೆ ನೆಟ್ಟಿದ್ದು, ಮತ್ತೊಂದು ಮಹತ್ತರ ನಿರ್ಧಾರ ಕೈಗೊಳ್ಳುವ ಇರಾದೆ ವ್ಯಕ್ತಪಡಿಸಿದೆ.
ಅದಕ್ಕಾಗಿ ಭಾರತೀಯ ಆದಾಯ ತೆರಿಗೆ ಕಾಯಿದೆ-1961 ಪುನರ್ರಚಿಸಲು ಮುಂದಾಗಿದ್ದು, ಪುನರ್ರಚಿಸುವ ಮುನ್ನ ನೂತನ ಅಂಶಗಳ ಅಳವಡಿಕೆಗೆ ಕಾರ್ಯಪಡೆಯೊಂದನ್ನು ಕೇಂದ್ರ ಸರ್ಕಾರ ರಚಿಸಿದೆ.
ಸೆಪ್ಟೆಂಬರ್ ನಲ್ಲೇ ಹೇಳಿದ್ದರು ಮೋದಿ!
ಕಳೆದ ಸೆಪ್ಟೆಂಬರ್ ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು 1961ರ 50ಕ್ಕೂ ಹೆಚ್ಚು ವರ್ಷಗಳ ಹಳೆಯ ಕಾನೂನನ್ನೇ ಮುಂದುವರಿಸುವ ಬದಲು, ಸುಧಾರಣೆ ತಂದು ಪುನರ್ರಚಿಸಬೇಕು ಎಂದು ಆದಾಯ ತೆರಿಗೆ ಅಧಿಕಾರಿಗಳ ಜತೆ ನಡೆಸಿದ ಕಾನ್ಫರೆನ್ಸ್ ನಲ್ಲಿ ತಿಳಿಸಿದ್ದರು.
ಹಾಗಾದರೆ ಕಾರ್ಯಪಡೆಯ ಕಾರ್ಯವೇನು?
ಪರೋಕ್ಷ ತೆರಿಗೆಗಾಗಿ 1961ರ ಕಾಯಿದೆ ಪುನರ್ರಚಿಸಲು ರಚಿಸಿರುವ ಕಾರ್ಯಪಡೆ ಹಲವು ಸುಧಾರಣೆ ಅಂಶಗಳನ್ನು ಗಮನಿಸಲಿದೆ. ಅಲ್ಲದೆ ವಿದೇಶದಲ್ಲಿ ಪ್ರಸ್ತುತ ಇರುವ ತೆರಿಗೆ ಕಾಯಿದೆ, ಹಲವು ಮಾದರಿ ಪ್ರಯೋಗ, ಎಂಥ ತೆರಿಗೆ ಪದ್ಧತಿಯಿಂದ ದೇಶದ ಆರ್ಥಿಕತೆಗೆ ಅನುಕೂಲ ಸೇರಿ ಹಲವು ಅಂಶಗಳನ್ನು ಪರಿಗಣಿಸಿ ಆರು ತಿಂಗಳೊಳಗೆ ಕೇಂದ್ರ ಸರ್ಕಾರಕ್ಕೆ ಈ ಕಾರ್ಯಪಡೆ ವರದಿ ಸಲ್ಲಿಸಲಿದೆ. ಈ ವರದಿ ಅನ್ವಯ ಕೇಂದ್ರ ಸರ್ಕಾರ ಕಾಯಿದೆ ಪುನರ್ರಚಿಸಲಿದೆ.
ಕಾರ್ಯಪಡೆಯಲ್ಲಿ ಇರುವವರು ಯಾರು?
ಸರ್ಕಾರದ ಈ ಕಾರ್ಯಪಡೆಯಲ್ಲಿ ಸದಸ್ಯರಾಗಿ ಪ್ರಧಾನಿ ಮೋದಿ, ಪರೋಕ್ಷ ತೆರಿಗೆ ಕೇಂದ್ರ ಮಂಡಳಿ (ಸಿಬಿಡಿಟಿ)ಯ ಆರು ಸದಸ್ಯರ ತಂಡ, ವಿಶೇಷ ಕಾಯಂ ಆಹ್ವಾನಿತರಾಗಿ ಆರ್ಥಿಕ ಮುಖ್ಯ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ಇತರ ಸದಸ್ಯರಾಗಿ ಸಿಎ ಗಿರೀಶ್ ಆಹುಜಾ, ರಾಜೀವ್ ಮೆಮಾನಿ, ಮುಖೇಶ್ ಪಟೇಲ್, ಮಾನ್ಸಿ ಕೇಡಿಯಾ ಸೇರಿ ಹಲವರು ಇರಲಿದ್ದಾರೆ.
ಒಟ್ಟಿನಲ್ಲಿ ಕೇಂದ್ರದ ಈ ಹೊಸ ತೆರಿಗೆ ಕಾಯಿದೆ ಪುನರ್ರಚನೆಯಿಂದ ಪ್ರತ್ಯಕ್ಷ ತೆರಿಗೆಗೆ ನೂತನ ಭಾಷ್ಯ ಬರೆಯುವ ಜತೆಗೆ, ತೆರಿಗೆ ವಂಚಿಸುವ, ಕಾಳಧನಿಕರಿಗೆ ಒಳ್ಳೆಯ ಪಾಠವಾಗಲಿದೆ ಎಂದು ಹೇಳಲಾಗುತ್ತಿದೆ. ನೋಟು ನಿಷೇಧ ಹಾಗೂ ಜಿಎಸ್ಟಿಯಂತೆಯೇ ಈ ಕಾಯಿದೆ ಪುನರ್ರಚನೆ ಮೋದಿ ಅವರ ಖ್ಯಾತಿ ಹೆಚ್ಚಿಸಲಿ ಹಾಗೂ ಇದರಿಂದ ದೇಶಕ್ಕೆ ಒಳ್ಳೆಯದಾಗಲಿ ಎಂಬುದು ನಮ್ಮ ಆಶಯ.
Leave A Reply