ಹಿಂದೂ ಭಯೋತ್ಪಾದನೆ ಇದೆ ಎಂದ ಕಮಲ್ ಹಾಸನ್ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ನಿರ್ದೇಶನ!

ಚೆನ್ನೈ: ಹಿಂದೂ ಭಯೋತ್ಪಾದನೆ ಅಸ್ತಿತ್ವ ಅಲ್ಲಗಳೆಯುವಂತಿಲ್ಲ ಎಂದು ವಿವಾದ ಸೃಷ್ಟಿಸಿದ್ದ ತಮಿಳು ನಟ ಕಮಲ್ ಹಾಸನ್ ಗೆ ಸಂಕಷ್ಟ ಎದುರಾಗಿದ್ದು, ಎಫ್ಐಆರ್ ದಾಖಲಿಸುವಂತೆ ಮದ್ರಾಸ್ ಹೈಕೋರ್ಟ್ ತಿಳಿಸಿದೆ.
ಕಮಲ್ ಹಾಸನ್ ವಿರುದ್ಧ ಮಾಡಲಾಗಿರುವ ಆರೋಪ ಹಾಗೂ ಆತ ನೀಡಿದ ಹೇಳಿಕೆ ತಪ್ಪನಿಂದ ಕೂಡಿದ್ದರೆ ಎಫ್ಐಆರ್ ದಾಖಲಿಸಿ ಎಂದು ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದೆ.
ಮದ್ರಾಸ್ ಹೈಕೋರ್ಟಿನಲ್ಲೇ ವಕೀಲರಾಗಿರುವ ಜಿ.ದೇವರಾಜ್ ಎಂಬುವವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎಸ್.ರಮೇಶ್, ತಪ್ಪಿತಸ್ಥ ಎಂದು ಮೇಲ್ನೋಟಕ್ಕೆ ಸಾಬೀತಾದರೆ ಪ್ರಕರಣ ದಾಖಲಿಸಿ ಎಂದು ತೀರ್ಪು ನೀಡಿದ್ದು, ಕಮಲ್ ಹಾಸನ್ ಗೆ ಸಂಕಷ್ಟ ಎದುರಾದಂತಾಗಿದೆ.
ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ ಎಂಬುದನ್ನು ಅವರು ಅರಿಯಬೇಕು ಹಾಗೂ ಪ್ರತಿ ಧರ್ಮವೂ ಶಾಂತಿಯನ್ನು ಬೋಧಿಸುತ್ತದೆ ಎಂಬುದನ್ನು ಮನಗಾಣಬೇಕು. ಆದರೆ ಅವರು ಮಾಡಿರುವ ಹೇಳಿಕೆಗಳು ಸಮುದಾಯದ ನಡುವೆ ಬಿರುಕು ಹುಟ್ಟಿಸುತ್ತವೆ ಎಂದು ದೇವರಾಜ್ ವಾದ ಮಂಡಿಸಿದ್ದರು.
ನ.8ರಂದು ನಿಯತಕಾಲಿಕೆಯೊಂದಕ್ಕೆ ಲೇಖನ ಬರೆದಿದ್ದ ಕಮಲ್ ಹಾಸನ್, ದೇಶದಲ್ಲಿ ಹಿಂದೂ ಭಯೋತ್ಪಾದನೆ ಅಸ್ತಿತ್ವ ಅಲ್ಲಗಳೆಯುವಂತಿಲ್ಲ ಎಂದು ಬರೆದಿದ್ದು, ವಿವಾದಕ್ಕೆ ಕಾರಣವಾಗಿತ್ತು.
Leave A Reply