ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಿನಗಣನೆ!
“ಮುಂದಿನ ಧರ್ಮ ಸಂಸದ್ ಅಯೋಧ್ಯೆಯ ರಾಮ ಮಂದಿರದಲ್ಲಿ” ಎಂದು ಸಾಧುಸಂತರು ಒಕ್ಕೂರಲಿನಿಂದ ನಿರ್ಧರಿಸಿಬಿಟ್ಟ ನಂತರ ಅದು ಖಂಡಿತವಾಗಿ ಜಾರಿಗೆ ಬಂದೇ ಬರುತ್ತದೆ. ಯೋಗಿಗಳ, ಸ್ವಾಮೀಜಿಗಳ ಘೋಷಣೆಗಳೇ ಹಾಗೆ. 1985 ರಲ್ಲಿ ಉಡುಪಿಯಲ್ಲಿ ಧರ್ಮ ಸಂಸದ್ ನಡೆದಾಗ ಅಯೋಧ್ಯೆಯ ರಾಮಮಂದಿರಕ್ಕೆ ಹಾಕಿದ ಬೀಗ ತೆಗೆಯುವ ತನಕ ಹೋರಾಟ ನಡೆಸಲಾಗುವುದು ಎಂದು ಸಂತರು ಘೋಷಿಸಿದ್ದರು. ಸಂತರು ಹೋರಾಡಲು ಅಖಾಡಕ್ಕೆ ಇಳಿಯುವ ಮೊದಲೇ ಆಗಿನ ಕೇಂದ್ರ ಸರಕಾರ ಬೀಗ ತೆರೆದು ಒಳಗೆ ಹೋಗಲು ಅವಕಾಶ ಮಾಡಿಕೊಟ್ಟಿತ್ತು. ಈಗ ಮತ್ತೊಮ್ಮೆ ರಾಮ ಮಂದಿರದ ಘೋಷಣೆ ಉತ್ತುಂಗಕ್ಕೆ ಏರಿದೆ. 2019 ಕ್ಕೆ ರಾಮ ಮಂದಿರ ಕಟ್ಟಿಯೇ ಸಿದ್ಧ ಎಂದು ಪೇಜಾವರ ಹಿರಿಯ ಶ್ರೀಗಳು ಹೇಳಿಯಾಗಿದೆ. ಆದ್ದರಿಂದ ಕೇಂದ್ರ ಸರಕಾರ ಕೂಡ ಆ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಬಿರುಸುಗೊಳಿಸುವ ಅಗತ್ಯ ಇದೆ.
ಅಷ್ಟಕ್ಕೂ ರಾಮ ಮಂದಿರ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿಯೇ ಆಗಬೇಕು ಎನ್ನುವ ಬಹುಸಂಖ್ಯಾತ ಹಿಂದೂಗಳ ಬಯಕೆ ಇವತ್ತು ನಿನ್ನೆಯದ್ದಲ್ಲ. ನಮಗೆ ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ಈ ಹೋರಾಟ ಪ್ರಾರಂಭವಾಗಿತ್ತು. ಸ್ವಾತಂತ್ರ್ಯ ಬಂದ ಬಳಿಕ ನಮ್ಮನ್ನು ಜಾತ್ಯಾತೀತ ಎನಿಸಿಕೊಂಡಿದ್ದ ಸರಕಾರಗಳು ಆಳುತ್ತಾ ಇದ್ದ ಕಾರಣ ಎಲ್ಲಿಯಾದರೂ ರಾಮ ಮಂದಿರ ಅಲ್ಲಿ ಕಟ್ಟಿದರೆ ಅಲ್ಪಸಂಖ್ಯಾತರಿಗೆ ಬೇಸರವಾಗಿ ಅವರು ತಮಗೆ ವೋಟ್ ಹಾಕದೇ ಇದ್ದರೆ ಎನ್ನುವ ಆತಂಕದಿಂದ ಅಲ್ಲಿ ರಾಮ ಮಂದಿರ ಕಟ್ಟುವ ಬಗ್ಗೆ ಯೋಚಿಸಲು ಕೂಡ ಹೆದರುತ್ತಿದ್ದವು. ಕಾಂಗ್ರೆಸ್ ಸರಕಾರ ಯಾವತ್ತೂ ಕೂಡ ಒಬ್ಬ ಸಾತ್ವಿಕ ಮುಸಲ್ಮಾನನನ್ನು ಕರೆದು ” ಸಾಬ್ರೇ, ನೀವು ಆ ಬಾಬ್ರಿ ಮಸೀದಿಯಲ್ಲಿ ನಮಾಜ್ ಮಾಡುವುದಿಲ್ಲ, ಅಲ್ಲೇನೂ ಭಾಂಗ್ ನಡೆಯುವುದಿಲ್ಲ. ನಮಾಜ್ ನಡೆಯದ ಮಸೀದಿಯನ್ನು ಮಸೀದಿ ಎಂದು ಕರೆಯಲು ನೀವೆ ಒಪ್ಪುವುದಿಲ್ಲ. ಇನ್ನು ಅಲ್ಲಿ ಶ್ರೀರಾಮಚಂದ್ರ ಹುಟ್ಟಿದ ಕುರುಹುಗಳನ್ನು ಪುರಾತತ್ವ ಇಲಾಖೆಯವರು ಪತ್ತೆ ಹಚ್ಚಿದ್ದಾರೆ. ಅಲ್ಲಿ ರಾಮ ಮಂದಿರ ಹಿಂದೆ ಇತ್ತು ಎನ್ನುವುದಕ್ಕೆ ದಾಖಲೆ ಇದೆ. ನಿಮಗೆ ಬೇಕಾದರೆ ಸರಕಾರಿ ಖರ್ಚಿನಲ್ಲಿ ಸರಯೂ ನದಿಯ ಆಚೆ ದೊಡ್ಡ ಮಸೀದಿ ಕಟ್ಟಿಸಿಕೊಡುತ್ತೇವೆ, ಹಿಂದೂಗಳು ತಮ್ಮ ಮಂದಿರವನ್ನು ಜೀರ್ಣೋದ್ಧಾರಗೊಳಿಸಿ ಪುನ:ಪ್ರತಿಷ್ಟೆ ಮಾಡಲಿ” ಎಂದು ಹೇಳಿದ್ದರೆ ಈ ವಿವಾದ ಅಲ್ಲಿಯೇ ಮುಗಿಯುತ್ತಿತ್ತು. ಅದನ್ನು ಎಳೆಯುವ ಅಗತ್ಯವೇ ಇರುತ್ತಿರಲಿಲ್ಲ. ಆದರೆ ಯಾವ ಕಾಂಗ್ರೆಸ್ ಸರಕಾರವೂ ಆ ಬಗ್ಗೆ ಧೈರ್ಯ ತೋರಲಿಲ್ಲ.
ಆದ್ದರಿಂದ ಈ ಧರ್ಮ ಸಂಸದ್ ನಲ್ಲಿ ಸಂತರು ಆದಷ್ಟು ಶೀಘ್ರದಲ್ಲಿ ರಾಮ ಮಂದಿರ ಕಟ್ಟುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ನ್ಯೂಟ್ರಲ್ ಇರುವ ಮುಸಲ್ಮಾನರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದರ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಆದರೆ ಕೆಲವು ಮೂಲಭೂತವಾದಿ ಇಸ್ಲಾಂ ಸಂಘಟನೆಗಳಿಗೆ ಇಗೋ ಪ್ರಶ್ನೆಯಾಗಿ ಇದು ಕಾಣುತ್ತಿದೆ. ಒಂದು ವೇಳೆ ನಾವು ಸೌಹಾರ್ಧಯುತವಾಗಿ ಬಿಟ್ಟುಕೊಟ್ಟರೆ ನಾವು ಹಿಂದೂಗಳಿಗೆ ತಲೆಬಾಗಿದಂತೆ ಆಗುತ್ತದೆಯೋ ಎಂದು ಅವರಿಗೆ ಅನಿಸುತ್ತಿದೆ. ಆದರೆ ಅದು ತಪ್ಪು ಅಭಿಪ್ರಾಯ. ಈಗಿನ ಮುಸಲ್ಮಾನ ಬಾಂಧವರು ಆವತ್ತು ಬಾಬರ್ ಮಾಡಿದ ತಪ್ಪನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಮಾಡಬಾರದು. ಭರತಖಂಡದ ಮೇಲೆ ದಂಡೆತ್ತಿ ಬಂದ ಅನೇಕ ಮುಸಲ್ಮಾನ ರಾಜರುಗಳಲ್ಲಿ ಬಾಬರ್ ಕೂಡ ಒಬ್ಬ. ತನ್ನ ಒರಗೆಯ ರಾಜರುಗಳಂತೆ ಈತ ಹಿಂದೂ ದೇವಾಲಯಗಳ ಮೇಲೆ ಆಕ್ರಮಣ ಮಾಡಿದ್ದಕ್ಕೆ ಇತಿಹಾಸ ಪುರಾವೆ ಒದಗಿಸುತ್ತದೆ. ಹಾಗೆ ಅಯೋಧ್ಯೆಯಲ್ಲಿ ಆತ ಕಟ್ಟಿಸಿದ ಮಸೀದಿಯನ್ನೇ ಬಾಬ್ರಿ ಮಸೀದಿ ಎನ್ನಲಾಗುತ್ತದೆ. ಅಲ್ಲಿ ಹಿಂದೆ ರಾಮನ ಮಂದಿರ ಇತ್ತು ಎನ್ನುವುದನ್ನು ದಾಖಲೆಗಳು ಹೇಳುತ್ತವೆ. ಆದ್ದರಿಂದ ಈಗ ಆಗಬೇಕಾಗಿರುವುದು ವಾಸ್ತವ ಒಪ್ಪಿಕೊಂಡು ಮಸೀದಿಯನ್ನು ಬೇರೆಡೆ ಸ್ಥಳಾಂತರಿಸಿ ಅಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಎಲ್ಲರೂ ಸಹಕರಿಸುವುದು.
ನಮಾಜ್ ನಡೆಯದ ಮಸೀದಿಯನ್ನು ಬೇಕಾದರೆ ಒಂದು ಕಡೆಯಿಂದ ಮತ್ತೊಂದೆಡೆ ಸ್ಥಳಾಂತರಿಸಿದರೆ ಅದರಿಂದ ಏನೂ ಅಪಚಾರ ಆಗುವುದಿಲ್ಲ. ಆದರೆ ಒಮ್ಮೆ ಪ್ರಾಣಪ್ರತಿಷ್ಟೆಗೊಂಡ, ಪ್ರತಿಷ್ಟಾಪಿಸ್ಪಟ್ಟ ದೇವರ ಮೂರ್ತಿಯನ್ನು ಮತ್ತೊಮ್ಮೆ ಅಲ್ಲಿಯೇ ಪುನ: ಪ್ರತಿಷ್ಟೆಗೊಳ್ಳಿಸಿ, ಜೀರ್ಣೋದ್ಧಾರಗೊಳಿಸಲೇಬೇಕು ವಿನ: ಅಲ್ಲಿಂದ ತೆಗೆದು ಬೇರೆಡೆ ಸ್ಥಳಾಂತರಿಸಲು ಆಗುವುದಿಲ್ಲ. ಇದನ್ನೆಲ್ಲ ಮುಸ್ಲಿಂ ಪಂಡಿತರು ಅರ್ಥ ಮಾಡಿಕೊಳ್ಳಬೇಕು. ಇನ್ನು ಇಂತಹ ಪ್ರಕರಣದಲ್ಲಿ ಭಾರತದ ಸುಪ್ರೀಂ ಕೋರ್ಟ್ ಕೂಡ ಆದಷ್ಟು ಬೇಗ ಸೂಕ್ತ ಆದೇಶ ಕೊಡಬೇಕು. ಎಲ್ಲಾ ದಾಖಲೆಗಳು ಹಿಂದೂಗಳ ಪರವಾಗಿ ಇರುವಾಗ ತಾವು ಕೊಡುವ ತೀರ್ಪು ಇನ್ನೊಂದು ಧರ್ಮದವರಿಗೆ ನೋವುಂಟು ಮಾಡುತ್ತದೆ ಎನ್ನುವ ಹಿಂಜರಿಕೆಯೇ ಇರಬಾರದು. ಕೆಲವು ಕಟ್ಟರ್ ಮುಸಲ್ಮಾನರು ಈ ವಿಷಯದಲ್ಲಿ ಒಂದು ಪ್ರಶ್ನೆ ಕೇಳಬಹುದು. ರಾಮ ಮಂದಿರ ಅಲ್ಲಿಯೇ ಕಟ್ಟಬೇಕು ಎನ್ನುವ ಬಯಕೆ ಯಾಕೆ? ಅದಕ್ಕೆ ಒಂದೇ ಉತ್ತರ “ಇದು ಆಸ್ಥಾ(ನಂಬಿಕೆ) ಪ್ರಶ್ನೆ”. ನಮ್ಮ ದೇವರು ಹುಟ್ಟಿದ ಜಾಗ ಅದು, ಆವತ್ತು ಬಾಬರ್ ನಿಗೆ ಅದರ ಮಹತ್ವ ಗೊತ್ತಿರಲಿಲ್ಲ. ಈಗಿನವರಿಗೆ ತಿಳುವಳಿಕೆ, ಜ್ಞಾನ ಇದೆ ಎಂದು ನಂಬಿಕೆ.
Leave A Reply