ನಾನು ಟೀ ಮಾರಿದ್ದು ನಿಜ, ದೇಶವನ್ನಲ್ಲ: ಕಾಂಗ್ರೆಸ್ಸಿಗೆ ಮೋದಿ ಟಾಂಗ್
ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಚಾಯ್ ವಾಲಾ ಎಂದು ಟೀಕಿಸಿದ್ದ ಕಾಂಗ್ರೆಸ್ಸಿಗರಿಗೆ ಮೋದಿ ಅವರು ಟಾಂಗ್ ನೀಡಿದ್ದು, ನಾನು ಚಹ ಮಾರಿದ್ದು ನಿಜ, ಆದರೆ ದೇಶವನ್ನು ಮಾರಿಲ್ಲ ಎಂದು ಗುಡುಗಿದ್ದಾರೆ.
ಗುಜರಾತಿನ ರಾಜ್ ಕೋಟ್ ನಲ್ಲಿ ಆಯೋಜಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಚಹ ಮಾರಿದ್ದೆ, ಮಾರುವವ ಕೂಡ ಹೌದು. ಆದರೆ ಪ್ರತಿಪಕ್ಷಗಳಂತೆ ಕೀಳುಮಟ್ಟಕ್ಕೆ ಇಳಿದಿಲ್ಲ ಹಾಗೂ ದೇಶವನ್ನು ಮಾರಿಲ್ಲ ಎಂದು ಟೀಕಿಸಿದ್ದಾರೆ.
ನಾನು ಬಡತನದ ಹಿನ್ನೆಲೆಯಿಂದ ಬಂದವನು ಎಂಬ ಕಾರಣಕ್ಕಾಗಿ ನನ್ನನ್ನು ಕಾಂಗ್ರೆಸ್ ಟೀಕಿಸುತ್ತದೆ. ನನ್ನನ್ನು ಕಂಡರೇನೇ ಅವರಿಗೆ ಆಗುವುದಿಲ್ಲ. ಒಬ್ಬ ಬಡವ ಪ್ರಧಾನಿಯಾದನಲ್ಲ ಎಂಬುದೇ ಕಾಂಗ್ರೆಸ್ಸಿನವರ ಹೊಟ್ಟೆ ಉರಿಯಲು ಕಾರಣವಾಗಿದೆ ಎಂದಿದ್ದಾರೆ.
ಒಂದು ರಾಷ್ಟ್ರೀಯ ಪಕ್ಷ ಇಂಥ ಕೀಳುಮಟ್ಟಕ್ಕೆ ಇಳಿಯುತ್ತದೆ ಎಂದು ನಾನು ಭಾವಿಸಿರಲಿಲ್ಲ. ಕಾಂಗ್ರೆಸ್ಸಿನವರಿಗೆ ಯಾರಿಗೇ ಆಗಲಿ ಗೌರವ ಕೊಡುವುದು ಗೊತ್ತಿಲ್ಲ. ಪಡೆಯುವುದು ಸಹ ಗೊತ್ತಿಲ್ಲ. ಕಾಂಗ್ರೆಸ್ಸಿನ ಹಿಂದಿನ ತಲೆಮಾರಿನವರೂ ನನ್ನನ್ನು ಕೀಳಾಗಿ ಕಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರ ಮುಂದೆ ಚಹಾ ಮಾರುವವ ಎಂಬಂತೆ ಬಿಂಬಿಸಿದ ಚಿತ್ರವನ್ನು ಕಾಂಗ್ರೆಸ್ ಯುವಘಟಕ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿತ್ತು. ಇದಕ್ಕೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
Leave A Reply