ರಾಷ್ಟ್ರಗೀತೆ ಕಡ್ಡಾಯ ಮಾಡಿದ ರಾಜಸ್ಥಾನ ಸರ್ಕಾರ ನೀಡಿದ ಕಾರಣವೇ ಸ್ಫೂರ್ತಿದಾಯಕ, ಇದನ್ನೇ ಎಲ್ಲರೂ ಅನುಸರಿಸಬೇಕಲ್ಲವೇ?
ಜೈಪುರ: ಭವ್ಯ ಭಾರತದ ಕಣ ಕಣದ ಅಂತಶಕ್ತಿಯನ್ನು ಹೊರಹೊಮ್ಮಿಸುವ ರಾಷ್ಟ್ರಗೀತೆಯನ್ನು ಮಕ್ಕಳು ನಿತ್ಯ ಹಾಡುವುದರಿಂದ ನವ ಚೈತನ್ಯ ಮೂಡುತ್ತದೆ. ಆ ಗೀತೆ ಹಾಡುವುದರಿಂದ ದೇಶ ಭಕ್ತಿ ಹೊರಹೊಮ್ಮುತ್ತದೆ. ದೇಶದ ಶಕ್ತಿ, ಏಕತೆ, ಭಾವೈಕ್ಯತೆಯನ್ನು ಮೂಡಿಸುತ್ತದೆ. ಅದನ್ನು ಎಲ್ಲ ಶಾಲೆಗಳ ಮಕ್ಕಳು ನಿತ್ಯ ಪಠಿಸಬೇಕು. ಇದರಲ್ಲಿ ಅನರ್ಥ ಹುಡುಕುವುದರಲ್ಲಿ ಅರ್ಥವಿಲ್ಲ.
ರಾಷ್ಟ್ರಗೀತೆಯನ್ನು ರಾಜ್ಯದ ಎಲ್ಲ ವಸತಿ ಶಾಲೆಗಳಲ್ಲಿ ಕಡ್ಡಾಯ ಮಾಡಿದ್ದಕ್ಕೆ ರಾಜಸ್ಥಾನ ಸರ್ಕಾರ ನೀಡಿದ ಸ್ಫೂರ್ತಿದಾಯಕ ಕಾರಣ ಇದು. ಹೀಗೆ ಕಾರಣ ಸಹಿತ ರಾಷ್ಟ್ರಗೀತೆಯ ಮಹತ್ವ ತಿಳಿಸಿದರೇ, ಎಂತಹ ಅನಕ್ಷರಸ್ಥನು ರಾಷ್ಟ್ರಗೀತೆಯ ಪದ ಕಿವಿಗೆ ಬಿದ್ದರೆ ಎದೆ ಉಬ್ಬಿಸಿ ನಿಲ್ಲುವುದರಲ್ಲಿ ಅನುಮಾನವಿಲ್ಲ.
ಒಂದು ನಿಯಮ ಜಾರಿಗೆ ತಂದು ಕಾಟಾಚಾರಕ್ಕೆ ನೆಪ ಹೇಳಿ, ಜನರ ಮೇಲೋ, ವಿದ್ಯಾರ್ಥಿಗಳ ಮೇಲೋ ಹೇರುವ ಬದಲು ಸ್ಪಷ್ಟ ನಿರ್ಧಾರದೊಂದಿಗೆ, ಸಾಮಾನ್ಯರಿಗೆ ಏಕೆ ಈ ನಿಯಮ ಜಾರಿಗೆ ತರುತ್ತಿದ್ದೇವೆ ಎಂಬುದನ್ನು ತಿಳಿಸುವ ರಾಜಸ್ಥಾನ ಸರ್ಕಾರದ ಕಾರ್ಯ ಶ್ಲಾಘನೀಯ.
ರಾಜಸ್ಥಾನದ ಸಮಾಜ ಕಲ್ಯಾಣ ಅಭಿವೃದ್ಧಿ ಇಲಾಖೆ ರಾಜ್ಯದ ಎಲ್ಲ ವಸತಿ ನಿಲಯಗಳಲ್ಲಿ ಬೆಳಗ್ಗೆಯ ಪ್ರಾರ್ಥನೆಯಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಈಗಾಗಲೇ ಹಲವು ವಸತಿ ಶಾಲೆಗಳಲ್ಲಿ ನಿತ್ಯ ರಾಷ್ಟ್ರಗೀತೆಯನ್ನು ಹಾಡುವ ಪದ್ಧತಿ ಜಾರಿಯಲ್ಲಿದೆ ಎಂದು ಸಮಾಜ ಕಲ್ಯಾಣ ಅಭಿವೃದ್ಧಿ ಇಲಾಖೆ ನಿರ್ದೇಶಕ ಸುಮಂತ ಶರ್ಮಾ ಹೇಳುತ್ತಾರೆ. ಇನ್ನು ಮುಂದೆ ರಾಜಸ್ಥಾನದ 800 ವಸತಿ ಶಾಲೆಗಳ 40,000 ವಿದ್ಯಾರ್ಥಿಗಳಿಂದ ನಿತ್ಯ ಬೆಳಗ್ಗೆ 7 ಗಂಟೆಗೆ ರಾಷ್ಟ್ರಗೀತೆ ಅನುರಣಿಸಲಿದೆ.
ಅಕ್ಟೋಬರ್ ನಲ್ಲಿ ಜೈಪುರ ಮಹಾನಗರ ಪಾಲಿಕೆಯ ಸಿಬ್ಬಂದಿಗೆ ಬೆಳಗ್ಗೆ ರಾಷ್ಟ್ರಗೀತೆ ಮತ್ತು ಸಾಯಂಕಾಲ ವಂದೆ ಮಾತರಂ ಕಡ್ಡಾಯವಾಗಿ ಹಾಡಬೇಕು ಎಂಬ ನಿಯಮ ಜಾರಿ ತಂದಿತ್ತು. ಅಲ್ಲದೇ ಅಲ್ಲಿನ ಮೇಯರ್ ಅಶೋಕ್ ಲಾಹೋಟಿ ‘ವಂದೆ ಮಾತರಂ ಹಾಡಲು ಇಷ್ಟವಿಲ್ಲದವರು ಪಾಕಿಸ್ತಾನಕ್ಕೆ ಹೋಗಬಹುದು’ ಎಂದು ಹೇಳುವ ಮೂಲಕ ರಾಷ್ಟ್ರ ಭಕ್ತಿ ಸಾರುವ ಗೀತೆಗಳ ಮಹತ್ವ ತಿಳಿಸಿದ್ದರು.
Leave A Reply