ಕಾಂಗ್ರೆಸ್ ತೆಗಳಿದರೇನು, ಇವಾಂಕಾ ಟ್ರಾಂಪ್ ಚಾಯ್ ವಾಲಾರನ್ನು ಹೊಗಳಿದರಲ್ಲ!

ಹೈದರಾಬಾದ್: ಯಾವ ಡೊನಾಲ್ಡ್ ಟ್ರಂಪ್ ಎದುರು ಮೋದಿ ಅವರ ವ್ಯಕಿತ್ವವನ್ನು ಕುಂದಿಸಲು ಕಾಂಗ್ರೆಸ್ ಕೀಳುಮಟ್ಟಕ್ಕೆ ಇಳಿಯಿತೋ, ಅದೇ ಡೊನಾಲ್ಡ್ ಟ್ರಂಪ್ ಮಗಳು ಇಂದು ಮೋದಿ ಅವರನ್ನು ಹೊಗಳಿದ್ದಾರೆ.
ಯುವ ಕಾಂಗ್ರೆಸ್ ಕಳೆದ ವಾರ ಮೋದಿ ಅವರ ಇಂಗ್ಲಿಷ್ ಪ್ರಶ್ನಿಸಿ, ಜಾಗತಿಕ ನಾಯಕರ ಎದುರು ಚಾಯ್ ವಾಲಾ ಎಂದು ಬಿಂಬಿಸಲು ಹೊರಟು ಟೀಕೆಗೆ ಗುರಿಯಾಗಿತ್ತು. ಈಗ ಇವಾಂಕಾ ಟ್ರಂಪ್ ಕಾಂಗ್ರೆಸ್ಸಿನ ಗಾಯಕ್ಕೆ ಉಪ್ಪು ಸುರಿದ್ದಿದ್ದು, “ಟೀ ಮಾರುವ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗಿದ್ದು ಹೆಮ್ಮೆಯ ವಿಚಾರ” ಎಂದಿದ್ದಾರೆ.
ಹೈದರಾಬಾದಿನಲ್ಲಿ ನಡೆಯುತ್ತಿರುವ ಜಾಗತಿಕ ವಾಣಿಜ್ಯೋದ್ಯಮದಲ್ಲಿ ಪಾಲ್ಗೊಂಡು, ನರೇಂದ್ರ ಮೋದಿ ಅವರ ಆಡಳಿತ ಮೆಚ್ಚುವ ಜತೆಗೆ, ಮೋದಿ ಅವರ ವೈಯಕ್ತಿಕ ಜೀವನದ ಕುರಿತು ಸಹ ಮೆಚ್ಚುಗೆ ವ್ಯಕ್ತಪಡಿಸಿದ ಇವಾಂಕಾ, “ನಿಜಕ್ಕೂ ನಿಮ್ಮ ಬೆಳವಣಿಗೆ ನೋಡಿದರೆ ಖುಷಿಯಾಗುತ್ತದೆ. ಒಬ್ಬ ಚಹ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗುವುದು ಹೆಮ್ಮೆಯ ವಿಚಾರ. ಇದರಲ್ಲೇ ಮೋದಿ ಅವರ ರೂಪಾಂತರ ಶಕ್ತಿ ಅಡಗಿದೆ. ಇದು ದೇಶದ ಅಭಿವೃದ್ಧಿಗೂ ಸಹಕಾರಿ” ಎಂದು ಶ್ಲಾಘಿಸಿದ್ದಾರೆ.
ಅಲ್ಲದೆ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಅಭಿವೃದ್ಧಿಗೂ ಅಷ್ಟೇ ಆದ್ಯತೆ ನೀಡಿದ್ದಾರೆ. ಈ ಎಲ್ಲ ದೃಷ್ಟಿಯಿಂದ ಭಾರತ ಜಾಗತಿಕ ಮಟ್ಟದಲ್ಲಿ ಉಚ್ಛ್ರಾಯ ಸ್ಥಿತಿ ತಲುಪುವುದರಲ್ಲಿ ಎರಡು ಮಾತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈ ಶೃಂಗಸಭೆಯಲ್ಲಿ ಇವಾಂಕಾ ಟ್ರಂಪ್ ನರೇಂದ್ರ ಮೋದಿ ಅವರ ಶಕ್ತಿ ಅರಿತು ಮೆಚ್ಚುಗೆ ಸೂಚಿಸಿರುವುದು ಹೆಮ್ಮೆಯ ವಿಚಾರದ ಜತೆಗೆ ಮೋದಿ ಅವರನ್ನು ಟೀಕಿಸುವವರಿಗೂ ಒಂದು ಪಾಠ ಹೇಳಿದ್ದಂತೂ ಸುಳ್ಳಲ್ಲ. ಅಷ್ಟಕ್ಕೂ, ಇಡೀ ವಿಶ್ವವೇ ಮೋದಿ ಅವರನ್ನು ಹೊಗಳುತ್ತಿರಬೇಕಾದರೆ, ನಮ್ಮಲ್ಲೇ ಇದ್ದು ಅವರನ್ನು ಕೀಳಾಗಿ ಚಿತ್ರಿಸುವವರಿಗೆ ಏನೆನ್ನಬೇಕೋ?