ಇದು ನೋಟ್ ಬ್ಯಾನ್ ಎಫೆಕ್ಟ್, 1.16 ಲಕ್ಷ ಜನರಿಗೆ ಐಟಿ ನೋಟಿಸ್!
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟು ನಿಷೇಧಿಸಿ ಒಂದು ವರ್ಷ ಕಳೆದರೂ ಅದರ ಪರಿಣಾಮ ಮಾತ್ರ ನಿಂತಿಲ್ಲ. ಕಾಳಧನಿಕರಿಗೆ ಮುಳುವಾಗದೇ ಬಿಟ್ಟಿಲ್ಲ.
ಇದಕ್ಕೆ ಮುನ್ನುಡಿಯಾಗಿ, ನೋಟು ನಿಷೇಧಿಸಿದ ಬಳಿಕ ಬ್ಯಾಂಕಿನಲ್ಲಿ 25 ಲಕ್ಷ ರುಪಾಯಿಗಿಂತ ಹೆಚ್ಚಿನ ಹಣ ಜಮೆ ಮಾಡಿದ 1.16 ಲಕ್ಷ ಮಂದಿ ಹಾಗೂ ಕಂಪನಿಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಇಷ್ಟು ಹಣ ಬ್ಯಾಂಕಿನಲ್ಲಿ ಇಟ್ಟು ವಹಿವಾಟು ನಡೆಸಿಯೂ ಆದಾಯ ತೆರಿಗೆ ಇಲಾಖೆಗೆ ಐಟಿ ರಿಟರ್ನ್ ಮಾಡದ ಕಾರಣ ಆದಾಯ ತೆರಿಗೆ ಕಾನೂನು ಉಲ್ಲಂಘನೆ ಆರೋಪಿಸಿ ಸೆಕ್ಷನ್ 142 (1)ರ ಅನ್ವಯ ನೋಟಿಸ್ ನೀಡಲಾಗಿದೆ.
ಅಲ್ಲದೆ ಐಟಿ ರಿಟರ್ನ್ಸ್ ಸಲ್ಲಿಸಲು ಐಟಿ ಇಲಾಖೆ ಒಂದು ತಿಂಗಳ ಕಾಲವಕಾಶ ನೀಡಿದ್ದು, ಸಲ್ಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಅಲ್ಲದೆ, ನೋಟ್ ಬ್ಯಾನ್ ಬಳಿಕ ಬ್ಯಾಂಕುಗಳಲ್ಲಿ 10-25 ಲಕ್ಷ ರೂಪಾಯಿ ಹಣ ಜಮೆಮಾಡಿದ ಸುಮಾರು 2.4 ಲಕ್ಷ ಜನ ಐಟಿ ರಿಟರ್ನ್ಸ್ ಸಲ್ಲಿಸಿಲ್ಲ. ಅವರಿಗೂ ಎರಡನೇ ಹಂತದಲ್ಲಿ ನೋಟಿಸ್ ನೀಡಲಾಗುವುದು ಎಂದು ಕೇಂದ್ರ ನೇರ ತೆರಿಗೆ ಮಂಡಳಿ ಅಧ್ಯಕ್ಷ ಸುಶೀಲ್ ಚಂದ್ರ ತಿಳಿಸಿದ್ದಾರೆ.
ಐಟಿ ರಿಟರ್ನ್ಸ್ ಸಲ್ಲಿಸಿದ ಕೆಲವು ಶಂಕಿತ ವಹಿವಾಟುಗಳ ಮೇಲೂ ನಿಗಾ ಇಡಲಾಗಿದೆ. ಈ ಕುರಿತು ಸುಮಾರು 23 ಲಕ್ಷ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Leave A Reply