ಐಐಟಿಯಲ್ಲಿ ಸೀಟು ಸಿಕ್ಕರೂ ದೇಶ ಸೇವೆಗೆ ಹೊರಟ ಈ ಯುವಕನಿಗೊಂದು ಸಲಾಂ ಹೇಳಿ ಬಿಡಿ!
ದೇಶದಲ್ಲಿರುವ ನಮ್ಮ ಬಹುತೇಕ ಮನಸ್ಥಿತಿಗಳು ಒಂದೆ. ನೆಗಡಿ, ತಲೆನೋವು ಬಂದರೆ 3 ದಿನ ಆಫೀಸಿಗೆ ರಜೆ ಹಾಕಲು ನೋಡುತ್ತೇವೆ. ಎಂಜಿನಿಯರ್, ಡಾಕ್ಟರ್ ಆಗುವುದೇ ಜೀವನದ ಪರಮ ಗುರಿ ಎಂದು ಭಾವಿಸಿದ್ದೇವೆ. ದೇಶ ಸೇವೆಯನ್ನು ಪಕ್ಕದ ಮನೆಯವನೇ ಮಾಡಲಿ ಎಂದು ನಾವು ಬೆಚ್ಚಗೆ ಮಲಗುತ್ತೇವೆ.
ಅಷ್ಟಕ್ಕೂ, ಸೈನಿಕರು, ಸೈನ್ಯ ಎಂದರೇನೇ ಮುರಕೊಂಡು ಬೀಳುವ, ಬಾಯಿಗೆ ಬಂದ ಹಾಗೆ ಮಾತನಾಡುವ ರಾಜಕಾರಣಿಗಳಿದ್ದಾರೆ. ಅಂಥಾದ್ದರಲ್ಲಿ ಒಬ್ಬ ಯುವಕ ಐಐಟಿಯಲ್ಲಿ ಸೀಟು ಸಿಕ್ಕರೂ, ದೇಶ ಸೇವೆಗೆ ಹೊರಟು ನಿಂತಿದ್ದಾನಲ್ಲ, ಅವನಿಗೆ ಸೆಲ್ಯೂಟ್ ಹೊಡೆಯಲೇಬೇಕು.
ಹೌದು, ಉತ್ತರಾಖಂಡದ ಶಿವಾಂಶ್ ಜೋಷಿಗೆ ಎಲ್ಲವೂ ಇತ್ತು. ಮಧ್ಯಮ ವರ್ಗದ ಕುಟುಂಬವಾದರೂ ಶಿಕ್ಷಣ ಕೊಡಿಸಲು ಅವರ ತಂದೆ ತಾಯಿ ಹಿಂದೆ ಮುಂದೆ ನೋಡಿರಲಿಲ್ಲ. ಜೋಷಿಯೂ ಜಾಣನಿದ್ದ. ಹಾಗಾಗಿಯೇ ಆತ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ ತನ್ನ 17ನೇ ವಯಸ್ಸಿಗೇ ಐಐಟಿಯಲ್ಲಿ ಓದುವ ಅವಕಾಶ ಪಡೆದ. ಪ್ರಾಯಶಃ ನಾವಾಗಿದ್ದರೆ, ಓಡೋಡಿ ಹೋಗುತ್ತಿದ್ದೆವೋ ಏನೋ?
ಆದರೆ ಶಿವಾಂಶ್ ಹಾಗೆ ಮಾಡಲಿಲ್ಲ.
ಐಐಟಿಯಲ್ಲೂ ಸೀಟು ಸಿಕ್ಕರೂ, ಮೊದಲಿನಿಂದಲೂ ತನ್ನ ಮನದಲ್ಲಿ ತುಡಿಯುತ್ತಿದ್ದ ದೇಶಸೇವೆ ಉತ್ಕಟ ಬಯಕೆಯ ಮೊಟ್ಟೆಗೆ ಕಾವು ಕೊಟ್ಟ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ ಡಿಎ) ನಡೆಸುವ ಪರೀಕ್ಷೆಯನ್ನೂ ಬರೆದ. ಅಷ್ಟೇ ಅಲ್ಲ, ಆತ ಮೊದಲನೇ ರ್ಯಾಂಕ್ ಪಡೆದು ಈಗ ರಕ್ಷಣಾ ಪಡೆಗೆ ಆಯ್ಕೆಯಾಗಿದ್ದಾನೆ. ತಂದೆ-ತಾಯಿಯೂ ಆತನ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ಬಾಲ್ಯದಿಂದಲೂ ನನಗೆ ಸೇನೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂದು ಉತ್ಕಟ ಬಯಕೆ ಇತ್ತು. ಅದು ಉತ್ತರಾಖಂಡದ ತುಂಬ ಯುವಕರಲ್ಲಿ ಇರುತ್ತದೆ. ಆದರೆ ನನಗೆ ಇಂದು ಆ ಕನಸು ನನಸಾಗುವ ಸಮಯ ಬಂದಿದೆ. ದೇಶಸೇವೆ ಮಾಡಲು ಅವಕಾಶ ಸಿಕ್ಕ ನಾನೇ ಭಾಗ್ಯಶಾಲಿ ಎನ್ನುವ ಶಿವಾಂಶ್ ಇಡೀ ಯುವಜನಾಂಗಕ್ಕೇ ಮಾದರಿ.
ಉತ್ತರಾಖಂಡದ ರಾಮನಗರದ ನಿವಾಸಿಯಾಗಿರುವ ಶಿವಾಂಶ್ ಪಿಯುಸಿಯಲ್ಲಿ ಶೇ.96.8ರಷ್ಟು ಅಂಕ ಪಡೆದು ಪಾಸಾಗಿದ್ದ. ಅನಾಯಾಸವಾಗಿ ಜ್ಯೂನಿಯರ್ ಪ್ರವೇಶ ಪರೀಕ್ಷೆ (ಜೆಇಇ) ಸಹ ಉತ್ತೀರ್ಣನಾದ. ಆದರೆ ಮನಸ್ಸೊಳಗೊಂದು ದೇಶಪ್ರೇಮದ ಕಿಚ್ಚಿತ್ತಲ್ಲ? ಅದನ್ನು ಹೊತ್ತಿಸಿ ಕೇಂದ್ರ ಲೋಕಸೇವಾ ಆಯೋಗದ ಎನ್ ಡಿಎ ಪರೀಕ್ಷೆ ಬರೆದ. ದೇಶಭಕ್ತಿಯಲ್ಲೂ ಆತ ನಂಬರ್ ಒನ್ ಆಗಿ, ಪರೀಕ್ಷೆ ಬರೆದ 370 ಅಭ್ಯರ್ಥಿಗಳಲ್ಲಿ ಮೊದಲಿಗನಾಗಿ ಆಯ್ಕೆಯಾಗಿದ್ದಾನೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನನ್ನ ರಾಜ್ಯದವರೇ. ಇವರೇ ನನಗೆ ಸ್ಫೂರ್ತಿ. ನನ್ನ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಡಲು ಸಿದ್ಧ ಎನ್ನುತ್ತಾನೆ ಶಿವಾಂಶ್.
ಶಿವಾಂಶ್ ಅಪ್ಪ ಸಂಜೀವ್ ಜೋಷಿ ಎಲ್ಐಸಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಸರ್ಕಾರಿ ಶಾಲೆ ಶಿಕ್ಷಕಿ. ಇವರ ಇನ್ನೊಬ್ಬ ಮಗ ಸಹ 8ನೇ ಕ್ಲಾಸಿನಲ್ಲಿ ಓದುತ್ತಿದ್ದು, ಆತನನ್ನೂ ಸೇನೆಗೆ ಸೇರಿಸುವ ಇಂಗಿತ ಈ ದಂಪತಿಯದ್ದು. ಹೇಳಿ ಇಂಥ ಕುಟುಂಬಕ್ಕೆ, ಶಿವಾಂಶ್ ಗೆ ಮನಸಲ್ಲಾದ್ದರೂ ಒಂದು ಸಲಾಂ ಹೊಡೆಯದಿದ್ದರೆ ಹೇಗೆ ಹೇಳಿ?
Leave A Reply