ಕೇರಳದಲ್ಲಿ ಮತ್ತೆ ಸಿಪಿಎಂ ಕಾರ್ಯಕರ್ತರ ಗೂಂಡಾಗಿರಿ, ಸಿಪಿಎಂ ಬಿಟ್ಟು ಬಿಜೆಪಿ ಸೇರಿದ ದಲಿತ ಮುಖಂಡನ ಹತ್ಯೆ
ತಿರುವನಂತಪುರ: ಕೇರಳದಲ್ಲಿ ಮತ್ತೆ ಸಿಪಿಎಂ ಕಾರ್ಯಕರ್ತರ ಗೂಂಡಾಗಿರಿ ಮುಂದುವರಿದಿದ್ದು, ಇತ್ತೀಚೆಗಷ್ಟೇ ಸಿಪಿಎಂ ತೊರೆದು ಬಿಜೆಪಿ ಸೇರಿದ್ದ ದಲಿತ ಮುಖಂಡರೊಬ್ಬರನ್ನು ಸಿಪಿಎಂ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತ್ರಿಸ್ಸುರ್ ಜಿಲ್ಲೆಯ ಕೈಪಮಂಗಳಂನಲ್ಲಿ 50 ವರ್ಷದ ಸತೀಶನ್ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ಮಾಡಿದ್ದು, ದಾಳಿ ವೇಳೆ ತೀವ್ರವಾಗಿ ಗಾಯಗೊಂಡಿದ್ದ, ತ್ರಿಸ್ಸುರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸತೀಶನ್ ಬೆಂಬಲಿಗರು ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಆರು ತಿಂಗಳ ಹಿಂದೆ ಗಲಾಟೆಯಾಗಿತ್ತು. ಇದರಿಂದ ಬೇಸತ್ತ ಸತೀಶನ್ ಹಾಗೂ ಆತನ 20 ಬೆಂಬಲಿಗರು ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದ್ದರು. ಇದನ್ನೇ ವೈಷಮ್ಯವಾಗಿ ಇಟ್ಟುಕೊಂಡ ಸಿಪಿಎಂ ಕಾರ್ಯಕರ್ತರು ಸತೀಶನ್ ಸೇರಿ ಹಲವು ಕಾರ್ಯಕರ್ತರ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ನಾಲ್ವರು ದಲಿತ ಕಾರ್ಯಕರ್ತರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಕೈಪಮಂಗಳಂ ಕ್ಷೇತ್ರವೊಂದರಲ್ಲೇ ಕಳೆದ ಆರು ತಿಂಗಳಲ್ಲೇ ಸಿಪಿಎಂ ಗೂಂಡಾಗಳು ಸತೀಶನ್ ಸೇರಿ ಇಬ್ಬರು ಬಿಜೆಪಿ ಮುಖಂಡರನ್ನು ಹತ್ಯೆ ಮಾಡಿದೆ. 2016ರ ಮೇ ತಿಂಗಳಲ್ಲಿ 33 ವರ್ಷದ ಪ್ರಮೋದ್ ಎಂಬುವವರನ್ನು ಹತ್ಯೆ ಮಾಡಲಾಗಿತ್ತು ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ ತ್ರಿಸ್ಸುರ್ ಜಿಲ್ಲೆಯಲ್ಲಿ 15 ದಿನಗಳಲ್ಲೇ ಬಿಜೆಪಿಯ ಇಬ್ಬರು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸತೀಶನ್ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಕೈಪಮಂಗಳಂ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರೂ, ಇದುವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ.
Leave A Reply