ಕಾಶ್ಮೀರದಲ್ಲಿ ಉಗ್ರರ ಸಂಹಾರ, 11 ತಿಂಗಳಲ್ಲೇ ಸೇನೆಯ ಸ್ಕೋರ್ 200!
ಅದೊಂದು ಕಾಲವಿತ್ತು. ದಿನಬೆಳಗಾದರೆ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ, ಅಷ್ಟು ಯೋಧರ ಸಾವು, ಇಷ್ಟು ಯೋಧರ ಸಾವು ಎಂಬ ಮಾತಿತ್ತು.
ಆದರೆ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಯಾವಾಗ ಅಸ್ತಿತ್ವಕ್ಕೆ ಬಂದಿತೋ, ಸೇನೆಗೆ ಸ್ವಾತಂತ್ರ್ಯ, ಉಗ್ರರ ವಿರುದ್ಧದ ದಾಳಿಗೆ ಪ್ರೋತ್ಸಾಹ, ಸರ್ಜಿಕಲ್ ದಾಳಿಗೆ ಅನುಮತಿ ನೀಡಿತೋ, ಅಲ್ಲಿಂದ ಕಾಶ್ಮೀರದ ಪರಿಸ್ಥಿತಿಯೇ ಬದಲಾಗತೊಡಗಿತು.
ಅದರಲ್ಲೂ ಪ್ರಸಕ್ತ ವರ್ಷದಲ್ಲಂತೂ ಸೇನೆ ಅಮೋಘ ಸಾಧನೆ ಮೆರೆದಿದ್ದು, 11 ತಿಂಗಳಲ್ಲೇ 200 ಉಗ್ರರನ್ನು ಹತ್ಯೆಗೈಯುವ ಮೂಲಕ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗುವವರಿಗೆ ಭಾರಿ ಆಘಾತ ನೀಡಿದೆ.
ಹಾಗೆ ನೋಡಿದರೆ ವರ್ಷದ ಆರಂಭದಿಂದಲೇ ಭಾರತೀಯ ಸೈನಿಕರು ಉಗ್ರರ ವಿರುದ್ಧ ಮುರಕೊಂಡು ಬಿದ್ದರು. ಕಂಡಲ್ಲಿ ಗುಂಡಿಟ್ಟುಕೊಂದರು. ಗಡಿಯಲ್ಲಿ ನುಸುಳುವವರ ಹೆಡೆಮುರಿಕಟ್ಟಿದರು.
ಬುರ್ಹಾನ್ ವನಿ ಹತ್ಯೆಯಾದ ಬಳಿಕ ಕಾಶ್ಮೀರದಲ್ಲಿ ಉಂಟಾದ ಗಲಭೆ ಹಾಗೂ ಉಗ್ರರ ಉಪಟಳ ತಡೆಯಲು ಸನ್ನದ್ಧವಾದ ಸೇನೆ, 2017ರ ಮೊದಲ 4 ನಾಲ್ಕು ತಿಂಗಳಲ್ಲೇ 42 ಉಗ್ರರನ್ನು ಹೊಡೆದುರುಳಿಸಿದ್ದರು. ಮೇನಲ್ಲಿ 17 ಉಗ್ರರನ್ನು ಹೊಡೆದುರುಳಿಸಿದರೆ, ಜೂನ್ ನಲ್ಲೇ ಬರೋಬ್ಬರಿ 30 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಒಟ್ಟಿನಲ್ಲಿ ಮೊದಲ ಏಳು ತಿಂಗಳು, ಅಂದರೆ ಜುಲೈ ವೇಳೆಗೆ 100 ಉಗ್ರರನ್ನು ಹತ್ಯೆಗೈದು, ಉಗ್ರರಿಗೆ ತಕ್ಕಪಾಠ ಕಲಿಸಿತ್ತು ಸೇನೆ.
ಯಾವಾಗ, ಕಳೆದ ಮೇ ತಿಂಗಳಲ್ಲಿ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿತೋ, ಅಲ್ಲಿಂದ ಉಗ್ರರು ಪತರಗುಟ್ಟಿದರು. ಅದರ ಪ್ರತಿಫಲವಾಗಿಯೇ ಜುಲೈನಿಂದ ನವೆಂಬರ್ ಅಂತ್ಯದ ವೇಳೆಗೆ, ಅಂದರೆ 4 ತಿಂಗಳಲ್ಲೇ ಸೇನೆ ಮತ್ತೆ 100 ಉಗ್ರರನ್ನು ಹತ್ಯೆ ಮಾಡಿದ್ದು, 11 ತಿಂಗಳಲ್ಲೇ 200 ಉಗ್ರರನ್ನು ಕೊಂದು ಹಾಕಿದೆ. ಇದು ಕಳೆದ ಏಳು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ವರ್ಷವೊಂದಲ್ಲೇ 200 ಉಗ್ರರನ್ನು ಹೊಡೆದುರುಳಿಸಿರುವುದು ದಾಖಲೆಯೇ ಸರಿ.
ಅಷ್ಟೇ ಅಲ್ಲ, ನೋಟು ನಿಷೇಧದಿಂದ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಹಣ ಬರದೆ ಉಗ್ರರ ಉಪಟಳ ಕಡಿಮೆಯಾಗಿದೆ. ಕೇಂದ್ರ ತನಿಖಾ ಸಂಸ್ಥೆ (ಎನ್ಐಎ) ದಾಳಿ ಮಾಡಿ ಪ್ರತ್ಯೇಕತಾವಾದಿಗಳನ್ನು ತಣ್ಣಗಾಗಿಸಿದೆ. ಒಳನುಸುಳುವಿಕೆಯನ್ನೂ ಹತ್ತಿಕ್ಕಲಾಗಿದೆ. ಇತ್ತೀಚೆಗಷ್ಟೇ, ಶಾಂತಿ-ಮಾತುಕತೆ ನಡೆಸಲು ಕೇಂದ್ರ ಸರ್ಕಾರ ದಿನೇಶ್ವರ್ ಮಿಶ್ರಾ ಎಂಬುವವರನ್ನು ನೇಮಿಸಿದೆ. ಕಲ್ಲು ತೂರಾಟ ಪ್ರಕರಣಗಳೂ ನಿಂತು ಹೋಗಿವೆ. ಲಷ್ಕರೆ ತಯ್ಯಬಾದಂಥ ಉಗ್ರ ಸಂಘಟನೆ ಸೇರಿದ ಯುವಕರು ವಾಪಸು ಮರಳುತ್ತಿದ್ದಾರೆ. ಕಲ್ಲು ತೂರಾಟಗಾರರ ಮನ ಪರಿವರ್ತಿಸಲು, ಅವರ ವಿರುದ್ಧ ದಾಖಲಿಸಿದ ಪ್ರಕರಣ ಕೈಬಿಟ್ಟ ರಾಜ್ಯ ಸರ್ಕಾರ ಸಕಾರಾತ್ಮಕ ಹೆಜ್ಜೆ ಇಟ್ಟಿದೆ. ಇದೆಲ್ಲದರ ಪರಿಣಾಮವಾಗಿ ಜಮ್ಮು-ಕಾಶ್ಮೀರದಲ್ಲಿ ಉಗ್ರರ, ಪ್ರತ್ಯೇಕತವಾದಿಗಳ, ಕಲ್ಲು ತೂರಾಟಗಾರರ ಹಾವಳಿ ಕಡಿಮೆಯಾಗಿದೆ.
ಒಟ್ಟಿನಲ್ಲಿ, ಕೇಂದ್ರ ಸರ್ಕಾರದ ಸಹಕಾರ, ರಾಜ್ಯ ಸರ್ಕಾರದ ನಿರ್ಧಾರ, ಸೇನೆಯ ಉಗ್ರರ ಸಂಹಾರಗಳು ಕಾಶ್ಮೀರದ ಪರಿಸ್ಥಿತಿ ಬದಲಾಯಿಸುತ್ತಿದ್ದು, ಅಲ್ಲಿ ಶಾಂತಿ ನೆಲೆಸಲಿ, ಉಗ್ರರೆಲ್ಲ ನಾಶವಾಗಲಿ ಎಂಬುದೇ ನಮ್ಮ ಆಶಯ.
Leave A Reply