ಉ.ಪ್ರ. ಸ್ಥಳೀಯ ಚುನಾವಣೆ: ಬಿಎಸ್ ಪಿಗೆ ಮುಖಭಂಗ, ಕಾಂಗ್ರೆಸ್ಸಿಗೆ ಅಮೇಥಿ ಸೇರಿ ಬಹುತೇಕ ಕಡೆ ಗರ್ವಭಂಗ!
ಲಖನೌ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶತಾಯ-ಗತಾಯ ಗೆಲ್ಲಲು ಪಣತೊಟ್ಟಿರುವ ಕಾಂಗ್ರೆಸ್ಸಿಗೆ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ಅತ್ತ ಸ್ಥಳೀಯವಾಗಿ ಪ್ರಬಲವಾಗಿದ್ದ ಬಿಎಸ್ ಪಿ ಗತಿಯೂ ಹೇಳತೀರದಾಗಿದೆ.
ಮಹಾನಗರ ಪಾಲಿಕೆ ಮೇಯರ್ ಸ್ಥಾನದ 16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 14 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಬಿಎಸ್ ಪಿ ಕೇವಲ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್ ಸೊನ್ನೆ ಸುತ್ತುವ ಮೂಲಕ ಭಾರಿ ಹಿನ್ನಡೆ ಅನುಭವಿಸಿತು.
ಅದರಲ್ಲೂ ಕಾಂಗ್ರೆಸ್ಸಿನ ಭದ್ರಕೋಟೆ, ರಾಹುಲ್ ಗಾಂಧಿಯವರ ಲೋಕಸಭೆ ಕ್ಷೇತ್ರ ಅಮೇಥಿಯಲ್ಲೇ ಕಾಂಗ್ರೆಸ್ ಮಣ್ಣು ಮುಕ್ಕಿದ್ದು, ರಾಹುಲ್ ಗಾಂಧಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಲ್ಲದೆ 198 ನಗರಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲೂ ಬಿಜೆಪಿಯೇ ಜಯಭೇರಿ ಬಾರಿಸಿದ್ದು, 79 ಸ್ಥಾನಗಳಲ್ಲಿ ಬಿಜೆಪಿ, 41 ಬಿಎಸ್ ಪಿ, 47 ಎಸ್ಪಿ, ಕಾಂಗ್ರೆಸ್ ಕೇವಲ 11 ಹಾಗೂ ಇತರರು 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಗೆಲುವು ಹೊಸ ಹುರುಪು ತಂದಿದೆ.
ಬಿಜೆಪಿ ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ, ಇದು ಅಭಿವೃದ್ಧಿಗೆ ಸಂದ ಜಯವಾಗಿದ್ದು, ಕಾರ್ಯಕರ್ತರಿಗೆ ಗೆಲುವು ಅರ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಬಿಜೆಪಿಗೆ ಈ ಗೆಲುವು ಸಿಹಿ ತಂದರೆ, ಸ್ಥಳೀಯವಾಗಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮುಕ್ತವಾಗಿದ್ದು, ರಾಹುಲ್ ಗಾಂಧಿಯವರನ್ನು ಚಿಂತೆಗೀಡು ಮಾಡಿರುವುದಂತೂ ಸುಳ್ಳಲ್ಲ.
Leave A Reply