ಪಾಕಿಸ್ತಾನ ದುರ್ಬಲ ಸರ್ಕಾರ ಎಂದು ಅಮೆರಿಕ ಟೀಕಿಸಿದ್ದೇಕೆ?
ವಾಷಿಂಗ್ಟನ್: ಜಮಾತ್ ಉದ್ ದವಾ ಮುಖ್ಯಸ್ಥ, ಉಗ್ರ ಹಫೀಜ್ ಸಯೀದ್ ಬಿಡುಗಡೆಗೊಳಿಸಿ, ಬಳಿಕ ಅಮೆರಿಕದ ಒತ್ತಾಯದಿಂದ ಆತನನ್ನು ಮರು ಗೃಹಬಂಧನಕ್ಕೆ ಒಳಪಡಿಸಿದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೊಳಗಾಗಿದ್ದ ಪಾಕಿಸ್ತಾನಕ್ಕೆ ಮತ್ತೊಂದು ಪೆಟ್ಟು ಬಿದ್ದಿದ್ದು, “ಪಾಕಿಸ್ತಾನ ದುರ್ಬಲ ಸರ್ಕಾರ” ಎಂದು ಅಮೆರಿಕ ಟೀಕಿಸಿದೆ.
ಪಾಕಿಸ್ತಾನದಲ್ಲಿ ಸಚಿವರೊಬ್ಬರ ತಲೆದಂಡಕ್ಕೆ ಒತ್ತಾಯಿಸಿ ಮುಸ್ಲಿಂ ಮೂಲಭೂತವಾದಿಗಳು ನಡೆಸಿದ ಪ್ರತಿಭಟನೆ ಹತ್ತಿಕ್ಕುವಲ್ಲಿ ವಿಫಲವಾದ ಸರ್ಕಾರ ಹಾಗೂ ಸಂಧಾನ ಮಾಡುವಲ್ಲಿ ಹಿನ್ನಡೆ ಅನುಭವಿಸಿದ ಸೇನೆಯ ನಡೆಯನ್ನು ಅಮೆರಿಕ ತಜ್ಞರು ತೀವ್ರವಾಗಿ ಟೀಕಿಸಿದ್ದು, ಪಾಕಿಸ್ತಾನ ತನ್ನ ದೇಶದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲವಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಇದು ಮತ್ತೆ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರಿಂದ ಮತ್ತೆ ಮುಜುಗರಕ್ಕೀಡಾದಂತಾಗಿದೆ.
ಇಸ್ಲಾಮಿಕ್ ಮೂಲಭೂತವಾದಿಗಳು ಪ್ರತಿಭಟನೆ ನಡೆಸುತ್ತಿರುವ ವೇಳೆ ಪಾಕಿಸ್ತಾನ ಸರ್ಕಾರ ಕೈಗೊಂಡ ಪ್ರತಿ ನಿರ್ಧಾರಗಳು ಉಗ್ರವಾದಿಗಳಿಗೆ ಪ್ರೋತ್ಸಾಹ ನೀಡುವಂತಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ ಪರಿಸ್ಥಿತಿ ಆತಂಕದಿಂದ ಕೂಡಿದೆ ಎಂದು ಟ್ರಂಪ್ ಸರ್ಕಾರದ ತಜ್ಞರು ಟೀಕಿಸಿದ್ದಾರೆ.
ಚುನಾವಣೆ ಕಾಯಿದೆಗೆ ತಿದ್ದುಪಡಿ ತಂದು ಪ್ರತಿಜ್ಞಾ ವಿಧಿ ಬದಲಾಯಿಸಿದ್ದ ಕಾನೂನು ಸಚಿವ ಜಾಹೀದ್ ಹಮೀದ್ ನಡೆ ಖಂಡಿಸಿದ್ದಲ್ಲದೇ, ಧರ್ಮನಿಂದನೆ ಆರೋಪದಲ್ಲಿ ಆತನ ವಜಾಕ್ಕಾಗಿ ಆಗ್ರಹಿಸಿ ಸಾವಿರಾರು ಮುಸ್ಲಿಮರು ಇಸ್ಲಾಮಾಬಾದ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಗಲಾಟೆಯಲ್ಲಿ ಸುಮಾರು 6 ಜನ ಮೃತಪಟ್ಟಿದ್ದರು. ಬಳಿಕ ಕಾನೂನು ಸಚಿವ ರಾಜೀನಾಮೆ ನೀಡಿದ್ದರು.
Leave A Reply