ಈ ಬಾರಿಯ ಮಳೆಗಾಲ ಮಂಗಳೂರಿನ ಹೃದಯಭಾಗಗಳಿಗೆ ಶಾಕ್ ಬಡಿದಂತೆ ಆಗಿತ್ತು
ಈ ಬಾರಿಯ ಮಳೆಗಾಲ ಮಂಗಳೂರಿನ ಹೃದಯಭಾಗಗಳಿಗೆ ಶಾಕ್ ಬಡಿದಂತೆ ಆಗಿತ್ತು. ನೀರು ಚರಂಡಿ ಬಿಟ್ಟು ರಸ್ತೆಗಳ ಮೇಲೆಯೇ ಹರಿಯುತ್ತಿತ್ತು. ಅದಕ್ಕೆ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.
ಅಭಿವೃದ್ಧಿಯ ಇಚ್ಚಾ ಶಕ್ತಿಯೇ ಇರದೆ ಬರೀ ಡಿಗ್ರಿ ಇದ್ದರೆ ಮಂಗಳೂರು ಉದ್ಧಾರವಾಗುತ್ತಾ?
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದಲ್ಲಿಯೇ ಮಾದರಿಯಾಗಬೇಕಿತ್ತು. ಅದರರ್ಥ ಈಗ ಆಗಿಲ್ವಾ? ಇಲ್ಲ, ಖಂಡಿತಾ ಆಗಲಿಲ್ಲ. ಹಾಗಾದರೆ ಇದಕ್ಕೆ ಯಾರು ಕಾರಣ. ಸಂಶಯವೇ ಇಲ್ಲ, ನಮ್ಮ ಶಾಸಕರು. ಹೀಗೆ ಹೇಳಿದ ಕೂಡಲೇ ಒಂದಿಷ್ಟು ನನ್ನ ಕಾಂಗ್ರೆಸ್ ಮಿತ್ರರು ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಆಕ್ಷೇಪಾರ್ಹ ಕಮೆಂಟ್ ಹಾಕಿ ಬಿಡುತ್ತಾರೆ. ಅದರ ಬದಲು ಯಾರೇ ಆಗಲಿ, ಅದು ಕಾಂಗ್ರೆಸ್ಸಿನವರೆ ಆಗಲಿ, ಭಾರತೀಯ ಜನತಾ ಪಾರ್ಟಿಯವರೇ ಆಗಲಿ ಅಥವಾ ಆಯಾ ಸಂದರ್ಭ ಅಥವಾ ಟ್ರೆಂಡಿಗೆ ಅನುಸಾರ ಮತ ಹಾಕುವ ಸಂಭಾವಿತ ಮಾನವ ಅಥವಾ ಯಾವುದೇ ವಿವಾದದಲ್ಲಿ ಬೀಳದೆ ತನ್ನ ಪಾಡಿಗೆ ತಾನು ತಲೆ ತಗ್ಗಿಸಿ ಕೆಲಸದಲ್ಲಿ ನಿರತರಾಗಿರುವ ನಾಗರಿಕರೇ ಆಗಿರಲಿ, ನಾನು ಹೇಳುವುದನ್ನು ಎರಡು ನಿಮಿಷದಲ್ಲಿ ಓದಿ, ಒಂದಿಷ್ಟು ಯೋಚಿಸಿದ ಬಳಿಕ ನಿಮಗೆ ಸರಿ ಎನಿಸಬಹುದು. ಯಾಕೆಂದರೆ ನಾನು ಕೊಡುವ ಕಾರಣಗಳನ್ನು ನಾನು, ನೀವು ಈ ಬಾರಿ ಅನುಭವಿಸಿದ್ದೆವೆ.
ನನ್ನ ಈ ಅಂಕಣ ಯಾವುದೇ ಪಕ್ಷದ ವಿರುದ್ಧ ಅಥವಾ ಪರ ಅಲ್ಲ. ನಮಗೆ ಯಾವುದೇ ಪಕ್ಷ ಊಟ ಹಾಕುವುದಿಲ್ಲ. ಆದರೆ ನಾವು ಕಟ್ಟುವ ತೆರಿಗೆಗೆ ನಮಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಆಯಾ ಪಕ್ಷಗಳಿಂದ ಗೆದ್ದು ಬಂದಿರುವ ಜನಪ್ರತಿನಿಧಿಗಳ ಜವಾಬ್ದಾರಿ. ಅದನ್ನು ಮಾಡಲು ಎಲ್ಲರಿಗಿಂತ ಹೆಚ್ಚು ಅವಕಾಶ ಶಾಸಕ ಜೆ ಆರ್ ಲೋಬೋ ಅವರಿಗೆ ಇತ್ತು. ರಾಜ್ಯದಲ್ಲಿ ಕೆಎಎಸ್ ಮಾಡಿ ಶಾಸಕರಾಗಿರುವ ಇನ್ನೊಬ್ಬ ವ್ಯಕ್ತಿ ಇದ್ದಾರೋ, ಇಲ್ವೋ. ಆದರೆ ಕಳೆದ ಬಾರಿ ಯೋಗಿಶ್ ಭಟ್ಟರಿಗೆ ಹಾಕುವ ಮತವನ್ನು ಲೋಬೋ ಅವರಿಗೆ ಹಾಕಲು ಕಾಂಗ್ರೆಸ್ ಕೊಟ್ಟ ಸಮರ್ಥನೆ ಏನು ನೆನಪಿದೆಯಾ- ಮಂಗಳೂರಿನ ಬಗ್ಗೆ ಸಮಗ್ರ ಗೊತ್ತಿರುವ ಒಬ್ಬ ಕೆಎಎಸ್ ಅಧಿಕಾರಿಯಾಗಿದ್ದವರನ್ನು ಶಾಸಕ ಮಾಡಿದರೆ ಅದರಿಂದ ಮಂಗಳೂರು ಸ್ವರ್ಗ ಆಗುತ್ತೆ ಎನ್ನುವ ರೀತಿಯಲ್ಲಿ ಕಾಂಗ್ರೆಸ್ ಬಿಂಬಿಸಿತಲ್ವಾ? ಕಾಂಗ್ರೆಸ್ ಆವತ್ತು ಆಸೆ ತೋರಿಸಿದ್ದು ನೋಡಿದ ಜನ 35 ವರ್ಷಗಳ ಒಂದೇ ಜಿಲ್ಲೆಯಲ್ಲಿ ಕೆಲಸ(!) ಮಾಡಿದ್ದ ವ್ಯಕ್ತಿಗೆ ನಮ್ಮ ಊರಿನ ಸಮಸ್ಯೆ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ ಎಂದೇ ಅಂದುಕೊಂಡಿದ್ದರು. ಅದರಲ್ಲಿಯೂ ಲೋಬೋ ಮೂರು ವರ್ಷ ಮನಪಾ ಎನ್ನುವ ಅನೇಕ ಕೆಎಎಸ್ ಗಳು ಬಂದು ಕೂರಲು ಹಾತೊರೆಯುತ್ತಿರುವ ಪೀಠದಲ್ಲಿ ಆಸೀನರಾಗಿದ್ದರು.
ಐದು ವರ್ಷ ಕುಂಡ್ಸೆಪುನಲ್ಲಿ ನಿರ್ದೇಶಕರಾಗಿದ್ದ ಲೋಬೊ ಇನ್ನು ಮಂಗಳೂರನ್ನು ತಿಳಿದುಕೊಳ್ಳಲು ಬೇರೆ ಅವಕಾಶವೇ ಬೇಕಿರಲಿಲ್ಲ. ಒಂದು ಕಾಲೇಜಿನ ಆಡಳಿತ ಮಂಡಳಿ ತನ್ನಲ್ಲಿ ಪ್ರಾಧ್ಯಾಪಕರನ್ನು ನೇಮಿಸುವಾಗ ಅವರ ಅರ್ಹತೆಯನ್ನು ನೋಡಿ ಅವರ ಕ್ವಾಲಿಫಿಕೇಶನ್ ಗಮನಿಸಿ ಅವರು ತಮ್ಮ ಕಾಲೇಜಿನ ಮಕ್ಕಳಿಗೆ ಒಳ್ಳೆಯ ಮಾರ್ಕುಗಳನ್ನು ತರಬಹುದು ಎಂದು ಗ್ಯಾರಂಟಿಯಾದ ಬಳಿಕವೇ ಕೆಲಸಕ್ಕೆ ತೆಗೆದುಕೊಳ್ಳುತ್ತದೆ. ಆದರೆ ಆ ಟೀಚರ್ ಮಕ್ಕಳಿಗೆ ಕಲಿಸುವುದರಲ್ಲಿ ಜೀರೋ ಆದರೆ ಆಗ ಅವರನ್ನು ಕ್ರಾಂಟ್ರಾಕ್ಟ್ ಮುಗಿದ ನಂತರ ಮುಂದಿನ ಅವಧಿಗೆ ಬೇಡಾ ಎಂದು ಹೇಳಿ ಬಿಡುವ ಕಾಲೇಜುಗಳಿವೆ. ಅಷ್ಟಕ್ಕೂ ಕೆಎಎಸ್ ಆಗಿ ಮೂರುವರೆ ದಶಕ ಒಂದೇ ಕಡೆ ಕಳೆದವರಿಗೆ ಮಂಗಳೂರಿನ ಪ್ರತಿಯೊಂದು ರಸ್ತೆಯ ಉದ್ದಗಲ, ಆಳ ಗೊತ್ತಿರಬೇಕಿತ್ತು. ಕುಂಡ್ಸೆಪುನಲ್ಲಿದ್ದವರಿಗೆ ಇಲ್ಲಿನ ಒಳಚರಂಡಿ, ನೀರಿನ ಪೈಪುಗಳ ಬಗ್ಗೆ ಸಮಗ್ರ ಗೊತ್ತಿರಬೇಕಿತ್ತು. ಆದರೆ ಈಗ ನೋಡಿದರೆ ಬೇಸಿಗೆಯಲ್ಲಿಯೂ ನೀರಿನ ಸಮಸ್ಯೆ, ಮಳೆಗಾಲದಲ್ಲಿಯೂ ನೀರಿನ ಸಮಸ್ಯೆ ಮಂಗಳೂರಿನಲ್ಲಿ ಸಾಮಾನ್ಯವಾಗಿದೆ. ಬೇಸಿಗೆಯಲ್ಲಿ ಒಂದೊ ಪೈಪುಗಳು ಒಡೆದು ಮಂಗಳೂರಿಗೆ ನೀರು ಬರುವುದೇ ಸ್ಟಾಪ್ ಆಗುತ್ತದೆ ಅಥವಾ ಅಲ್ಲಿ ನೀರು ಇಲ್ಲ ಎಂದು ಹೇಳಿ ಕೊಡುವುದನ್ನೇ ಇವರು ಸ್ಟಾಪ್ ಮಾಡಿಬಿಡುತ್ತಾರೆ. ಡಿಸೆಂಬರ್ ಅಂತ್ಯದ ತನಕ ಡ್ಯಾಂ ಗೇಟ್ ಮುಚ್ಚದೆ ನೀರು ವ್ಯಯವಾಗುವುದನ್ನು ಕಣ್ಣು ತೆರೆದು ನೋಡಿ ಅಯ್ಯೋಯ್ಯೋ ನೀರು ಪೋಲಾಯಿತು ಎಂದು ಬೊಬ್ಬೆ ಹಾಕುತ್ತಾ ಯಾರದ್ದೋ ಮೇಲೆ ಆರೋಪ ಹಾಕುವುದು ಪಾಲಿಕೆಯ ವ್ಯಾಪ್ತಿಯ ಶಾಸಕರ ಚಾಳಿಯಾಗಿದೆ.
ಇನ್ನು ಮಳೆಗಾಲದ ವಿಷಯ ಬಂದರೆ ನೀರು ಚರಂಡಿಗಿಂತ ಹೆಚ್ಚು ರಸ್ತೆಗಳ ಮೇಲೆ ಓಡಿದ್ದು ನಮ್ಮ ಶಾಸಕರ ಸಾಧನೆ. ಬಲ್ಮಠ, ಜ್ಯೋತಿ ಸರ್ಕಲ್ ಮಧ್ಯೆ ಆದ ಕೃತಕ ನೆರೆಗೆ ನಂತರ ಕಾರಣ ಹುಡುಕುವುದು ಸಾಮಾನ್ಯ ಡಿಗ್ರಿ ಕಲಿತು ಜನಪ್ರತಿನಿಧಿಯೊಬ್ಬ ಮಾಡುವ ಮುಠಾಳತನ. ಆದರೆ ಇದೇ ಊರಿನಲ್ಲಿ ಕಮೀಷನರ್ ಆಗಿ ಆ ರಸ್ತೆಯ ಕೆಲಸಕ್ಕೆ ಹಣ ಮಂಜೂರು ಮಾಡಿ ಮೊದಲೇ ಅನುಭವ ಇದ್ದ ವ್ಯಕ್ತಿಯೊಬ್ಬರು ಶಾಸಕರಾದ ಮೇಲೆಯೂ ಅಲ್ಲಿ ಜೋರು ಮಳೆ ಬಂದು ಜನ ಶಾಪ ಹಾಕುವ ಮಟ್ಟಿಗೆ ನಿದ್ರೆ ಮಾಡಿದ್ರು ಎಂದರೆ ಇದು ನಮ್ಮ ಊರಿನ ಗ್ರಹಚಾರ. ಈ ಬಾರಿಯಂತೂ ಹತ್ತಕ್ಕೆ ಎಂಟು ರಸ್ತೆಗಳು ನೀರಿನಲ್ಲಿ ಮುಳುಗಿದ್ದವು. ಚರಂಡಿಗಳಲ್ಲಿ ಮಣ್ಣು, ಹೂಳು ತುಂಬಿದ ಕಾರಣ ಮಳೆಗೆ ಹೋಗಲು ದಾರಿಯೇ ಇರಲಿಲ್ಲ. ನಿನ್ನೆ ಕೂಡ ಎಂಪಾಯರ್ ಮಾಲಿನ ಪಕ್ಕದ ರಸ್ತೆಯ ಎರಡು ಬದಿಯ ಚರಂಡಿಗಳಿಂದ ಮಣ್ಣು ತೆಗೆದು ಒಬ್ಬ ಕೂಲಿಯವರು ಮೇಲೆ ಹಾಕುತ್ತಾ ಇದ್ದರು. ಅವರು ಆಚೆ ಹೋಗಿ ಈಚೆ ಜೋರು ಮಳೆ ಬಂದರೆ ಮಣ್ಣು ಮತ್ತೆ ಎಲ್ಲಿ ಹೋಗುತ್ತೆ, ಶಾಸಕರೇ! ಇಷ್ಟು ಮಾಡಲು ಕೆಎಎಸ್ ಆಗ್ಬೇಕಾ.
Leave A Reply