ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರ ಮೇಲೆ ದಾಳಿ ಮಾಡಿದ್ದ ಮೂವರು ಎಲ್ಇಟಿ ಉಗ್ರರ ಸಂಹಾರ!
ಶ್ರೀನಗರ: ಕಳೆದ ವಾರವಷ್ಟೇ ಕಾಶ್ಮೀರದಲ್ಲಿ ವರ್ಷದಲ್ಲೇ 200 ಉಗ್ರರನ್ನು ಸದೆಬಡಿದ ಕೀರ್ತಿ ಪತಾಕೆ ಹಾರಿಸಿದ್ದ ಭಾರತೀಯ ಸೈನಿಕರು ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದ್ದು, ಮಂಗಳವಾರ ಬೆಳಗ್ಗೆ ಮತ್ತೆ ಮೂವರನ್ನು ಹೊಡೆದುರುಳಿಸಿದ್ದಾರೆ.
ಕಳೆದ ಜುಲೈನಲ್ಲಿ ಅಮರನಾಥ ಯಾತ್ರಿಕರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ ಎನ್ನಲಾದ ಮೂವರು ಲಷ್ಕರೆ ತಯ್ಯಬಾ ಉಗ್ರರನ್ನು ದಕ್ಷಿಣ ಕಾಶ್ಮೀರದಲ್ಲಿ ಎನ್ ಕೌಂಟರ್ ಮಾಡಿ ಬಿಸಾಕಿದ್ದಾರೆ. ದಾಳಿ ವೇಳೆ ಪರಾರಿಯಾಗಲು ಯತ್ನಿಸಿದ ಉಗ್ರನೊಬ್ಬನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಜಿ ಗಂದ್ ಎಂಬಲ್ಲಿ ಸೋಮವಾರ ಮಧ್ಯಾಹ್ನವೇ ಉಗ್ರರು ದಾಳಿ ಮಾಡಿದ್ದು, ಒಬ್ಬ ಯೋಧ ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪ್ರತಿದಾಳಿ ನಡೆಸಿದ್ದು, ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ಎನ್ ಕೌಂಟರ್ ಮುಗಿದ್ದು, ಅಷ್ಟೊತ್ತಿಗಾಗಲೇ ಮೂವರನ್ನು ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಮೃತರನ್ನು ಸ್ಥಳೀಯ ಉಗ್ರ ಯವರ್ ಬಸೀರ್, ವಿದೇಶಿ ಉಗ್ರರಾದ ಅಬು ಫಾರ್ಖನ್ ಹಾಗೂ ಅಬು ಮಾವಿಯಾ ಎಂದು ಗುರುತಿಸಲಾಗಿದ್ದು, ಇವರು ಜುಲೈ 10ರಂದು ಅಮರನಾಥ ಯಾತ್ರಿಕರ ಮೇಲೆ ದಾಳಿ ಮಾಡಿ 19 ಯಾತ್ರಿಕರನ್ನು ಕೊಂದ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Leave A Reply