ಸಿಪಿಇಸಿ ಯೋಜನೆ ಅನ್ವಯ ಪಾಕಿಸ್ತಾನಕ್ಕೆ ಹಣ ನೀಡಲ್ಲ ಎಂದ ಚೀನಾ, ಪಾಕಿಸ್ತಾನಕ್ಕೆ ಹಿನ್ನಡೆ
ಬೀಜಿಂಗ್: ಡೈಮರ್ ಭಾಷಾ ಅಣೆಕಟ್ಟು ಯೋಜನೆಗೆ ಚೀನಾ ನೀಡಲು ಮುಂದಾಗಿದ್ದ 14 ಬಿಲಿಯನ್ ಡಾಲರ್ ಹಣ ತಿರಸ್ಕರಿಸಿ ಉದ್ಧಟತನ ಮೆರೆದಿದ್ದ ಪಾಕಿಸ್ತಾನಕ್ಕೆ ಚೀನಾ ಸರಿಯಾಗಿಯೇ ತಪರಾಕಿ ನೀಡಿದ್ದು, ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯಡಿಯಲ್ಲಿ ಅನುದಾನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಚೀನಾ-ಪಾಕಿಸ್ತಾನ ಗಡಿಯಲ್ಲಿ ಸಿಪಿಇಸಿ ಅನ್ವಯ ಸುಮಾರು 60 ಶತಕೋಟಿ ಡಾಲರ್ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಪಾಕಿಸ್ತಾನ ಚೀನಾ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅನುದಾನ ನೀಡುವುದಿಲ್ಲ ಎಂದು ತಿಳಿಸಿದೆ. ಇದು ಪಾಕಿಸ್ತಾನಕ್ಕೆ ಮುಖಭಂಗವಾದಂತಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಿನ್ನಡೆಯಾದಂತಾಗಿದೆ.
ಪಾಕಿಸ್ತಾನಕ್ಕೆ ರಸ್ತೆ ನಿರ್ಮಾಣ ಕಾಮಗಾರಿಗೆ ಒಪ್ಪಂದದಂತೆ ಚೀನಾ ಒಂದು ಲಕ್ಷ ಕೋಟಿ ರೂಪಾಯಿ ನೀಡಬೇಕಿತ್ತು. ಕಳೆದ ತಿಂಗಳು ನೀಡುವುದಾಗಿಯೂ ತಿಳಿಸಿತ್ತು. ಆದರೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅನುದಾನ ನೀಡದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಚೀನಾದ ಈ ನಿರ್ಧಾರದಿಂದ ಪಾಕಿಸ್ತಾನ “ಚಿಂತಾಕ್ರಾಂತ”ವಾಗಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ಇದರಿಂದ ಸುಮಾರು 210 ಕಿಮೀವರೆಗೆ (ಡೇರಾ ಇಸ್ಲಾಯಿಲ್ ಖಾನ್-ಝೋಬ್ ರಸ್ತೆ) ರಸ್ತೆ ನಿರ್ಮಿಸಲು ಯೋಜನೆ ರೂಪಿಸಿದ ಪಾಕಿಸ್ತಾನಕ್ಕೆ ಈಗ ಕಾಮಗಾರಿ ನಡೆಸುವುದೇ ಚಿಂತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಡೈಮರ್ ಭಾಷಾ ಅಣೆಕಟ್ಟು ನಿರ್ಮಾಣ ಮಾಡಲು ಚೀನಾ ಪಾಕಿಸ್ತಾನಕ್ಕೆ 14 ಬಿಲಿಯನ್ ಡಾಲರ್ ನೀಡಲು ಮನಸ್ಸು ಮಾಡಿತ್ತು. ಆದರೆ ಸೊಕ್ಕು ತೋರಿಸಿದ್ದ ಪಾಕಿಸ್ತಾನ, ಸ್ವಂತ ಹಣದಿಂದಲೇ ಡ್ಯಾಂ ನಿರ್ಮಿಸುವುದಾಗಿ ಹೇಳಿತ್ತು. ಆದರೆ ಈಗ ಚೀನಾ ಸಿಪಿಇಸಿ ಯೋಜನೆ ಹಣಕ್ಕೂ ತಾತ್ಕಾಲಿಕ ತಡೆಯೊಡ್ಡಿದ್ದು, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ.
Leave A Reply