ನೋಟ್ ಬ್ಯಾನ್ ಬಳಿಕ ಇ-ವಹಿವಾಟಿಗೆ ಉತ್ತೇಜನ, ಟೋಲ್ ಇ-ಪೇಮೆಂಟ್ ನಲ್ಲಿ ಏರಿಕೆ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ನೋಟು ನಿಷೇಧ ನಿರ್ಧಾರದಿಂದ ದೇಶದಲ್ಲಿ ಇ-ವಹಿವಾಟು ಜಾಸ್ತಿಯಾಗಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಲಭ್ಯವಾಗಿದೆ.
ಹೌದು, ನೋಟ್ ಬ್ಯಾನ್ ಬಳಿಕ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇ-ಟೋಲ್ ಪೇಮೆಂಟ್ (ಅಂತರ್ಜಾಲ ಸೇವೆ ಬಳಸಿ ಟೋಲ್ ಶುಲ್ಕ ಪಾವತಿ) ಮಾಡುವ ಪ್ರಮಾಣದಲ್ಲಿ 100 ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಐಆರ್ ಬಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ನ ಅಧ್ಯಕ್ಷ ವಿರೇಂದ್ರ ಮೈಸ್ಕರ್ ಮಾಹಿತಿ ನೀಡಿದ್ದು, ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕ ವರದಿಯಲ್ಲಿ 322 ಕೋಟಿ ರೂಪಾಯಿ ಟೋಲ್ ಸಂಗ್ರಹಿಸಿದ್ದು, ಅದರಲ್ಲಿ ಕೇವಲ 1.6 ಕೋಟಿ ರೂಪಾಯಿ ಮಾತ್ರ ಇ-ಪೇಮೆಂಟ್ ಮೂಲಕ ಪಾವತಿಸಲಾಗಿತ್ತು. ಆದರೆ ಈಗ ಮೂರನೇ ತ್ರೈಮಾಸಿಕ ವರದಿ ಬಿಡುಗಡೆಯಾಗಿದ್ದು ಇದು 100 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಮೂರನೇ ತ್ರೈಮಾಸಿಕ ಹಣಕಾಸು ವರದಿ ಅನ್ವಯ 97 ಕೋಟಿ ರೂಪಾಯಿ ಹಣ ಬರೀ ಇ-ಪೇಮೆಂಟ್ ಮೂಲಕವೇ ಸಂಗ್ರಹವಾಗಿದ್ದು, ನೋಟ್ ಬ್ಯಾನ್ ಬಳಿಕ ದಿನೇದಿನೆ ಟೋಲ್ ಇ-ಪೇಮೆಂಟ್ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಹೀಗೆ ಟೋಲ್ ಶುಲ್ಕವನ್ನು ಇ-ಪೇಮೆಂಟ್ ಮೂಲಕ ಮಾಡುವುದರಿಂದ ಚಿಲ್ಲರೆ ಸಮಸ್ಯೆ, ಸಮಯದ ಉಳಿತಾಯ ಸಹ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಒಂದೇ ಒಂದು ನಿರ್ಧಾರದಿಂದ ಪ್ರಸ್ತುತ ಕಪ್ಪು ಹಣ ದಂಧೆಕೋರರಿಗೆ ಕಡಿವಾಣ, ತೆರಿಗೆದಾರರ ಹೆಚ್ಚಳ, ಕ್ಯಾಶ್ ಲೆಸ್ ವ್ಯವಹಾರಕ್ಕೆ ಉತ್ತೇಜನ ಸಿಗುತ್ತಿದೆ.
Leave A Reply