ಗುಜರಾತ್ ಚುನಾವಣೆ ಹಿನ್ನೆಲೆ ಸಾಲು ಸಾಲು ಸಮೀಕ್ಷೆ, ಎಲ್ಲದರಲ್ಲೂ ಬಿಜೆಪಿಗೇ ಶ್ರೀರಕ್ಷೆ
ಗಾಂಧಿನಗರ: ದೇಶದಲ್ಲಿ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಯಾವುದೇ ರಾಜ್ಯದಲ್ಲೂ ಚುನಾವಣೆ ನಡೆದರೂ ಮೋದಿ ಅಲೆ ಕುರಿತು ಲೆಕ್ಕಾಚಾರ ಹಾಕಲಾಗುತ್ತದೆ. ಮುಖ್ಯಮಂತ್ರಿ ಅಭ್ಯರ್ಥಿಗಿಂತಲೂ ಮೋದಿ ಯಾವ ಅಸ್ತ್ರ ಬಳಸಲಿದ್ದಾರೆ ಎಂಬ ಲೆಕ್ಕಾಚಾರ ಹಾಕಲು ಶುರು ಮಾಡುತ್ತಾರೆ.
ಇನ್ನು ಮೋದಿ ಅವರ ತವರು ರಾಜ್ಯ ಗುಜರಾತ್ ಎಂದರೆ ಸುಮ್ಮನೆಯೇ? ಅದಕ್ಕಾಗಿ ದೇಶದ ಬಹುತೇಕ ಚಾನೆಲ್ ಗಳು ಸಮೀಕ್ಷೆ ಮಾಡುತ್ತಿವೆ. ಗುಜರಾತಿನಲ್ಲಿ ಮೋದಿ ಹವಾ ಇದೆಯೋ, ಇಲ್ಲವೋ ಎಂದು ವರದಿ ಮಾಡಲಾಗುತ್ತಿದೆ. ಹೀಗೆ ಮಾಡಿದ ಸಮೀಕ್ಷೆಗಳೆಲ್ಲದರಲ್ಲೂ ಜನರ ಶ್ರೀರಕ್ಷೆ ಇದೆ ಎಂಬುದೇ ಸಾಬೀತಾಗುತ್ತಿದೆ.
ಹೌದು, ಇತ್ತೀಚೆಗೆ ಇಂಡಿಯಾ ಟಿವಿ, ಟೈಮ್ಸ್ ನೌ, ನ್ಯೂಸ್ ನೇಷನ್ ಸುದ್ದಿವಾಹಿನಿಗಳು ಸಮೀಕ್ಷೆ ನಡೆಸಿದ್ದು, ಗುಜರಾತಿನಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ.
ಅದರಲ್ಲೂ ರಾಷ್ಟ್ರೀಯ ಪ್ರಮುಖ ಸುದ್ದಿವಾಹಿನಿ, ಟೈಮ್ಸ್ ನೌ ಚಾನೆಲ್ ನಡೆಸಿದ ಸಮೀಕ್ಷೆಯಲ್ಲೂ ಬಿಜೆಪಿಯೇ ಗೆಲುವು ಸಾಧಿಸುತ್ತದೆ ಎಂದು ತಿಳಿದುಬಂದಿದೆ.
ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ, ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 111 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುತ್ತದೆ ಎಂದು ಜನ ತಿಳಿಸಿದ್ದಾರೆ.
ಕಾಂಗ್ರೆಸ್ 68 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಹಿಂದಿನ ಚುನಾವಣೆಗಿಂತಲೂ ಶೇ.3ರಷ್ಟು ಹೆಚ್ಚಿನ ಜನ ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದು ರಾಷ್ಟ್ರೀಯ ಸುದ್ದಿವಾಹಿನಿಯಾಗಿರುವ ಇಂಡಿಯಾ ಟಿವಿ ನಡೆಸಿದ ಸಮೀಕ್ಷೆಯಲ್ಲೂ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂದು ಬಹಿರಂಗವಾಗಿದ್ದು, ಸುಮಾರು 106-116 ಸ್ಥಾನಗಳು ಬಿಜೆಪಿಯ ಪಾಲಾಗಲಿವೆ ಎಂದು ವರದಿ ತಿಳಿಸಿದೆ. ಅಲ್ಲದೆ, ಶೇ.36ರಷ್ಟು ಜನ ವಿಜಯ್ ರೂಪಾನಿ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಅಭಿಲಾಷೆ ವ್ಯಕ್ತಪಡಿಸಿರುವುದು ಬಿಜೆಪಿ ಸರ್ಕಾರ ರಚಿಸುವುದು ಖಚಿತ ಎಂಬಂತಾಗಿದೆ.
ನ್ಯೂಸ್ ನೇಷನ್ ವಾಹಿನಿ ಸಮೀಕ್ಷೆಯಲ್ಲಂತೂ, ಬಿಜೆಪಿ ಗರಿಷ್ಠ, ಅಂದರೆ 131-141 ಸ್ಥಾನಗಳಲ್ಲಿ ಮೇಲುಗೈ ಸಾಧಿಸುತ್ತದೆ ಎಂದೂ, ಕಾಂಗ್ರೆಸ್ 37-47 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ. ಅಲ್ಲದೆ, ಇತ್ತೀಚೆಗೆ ಎಬಿಪಿ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲೂ ಬಿಜೆಪಿಯೇ ಗೆಲುವು ಸಾಧಿಸುತ್ತದೆ ಎಂದು ತಿಳಿದುಬಂದಿತ್ತು. ಒಟ್ಟಿನಲ್ಲಿ ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆ ಪೂರ್ವ ನಡೆಸುವ ಎಲ್ಲ ಸಮೀಕ್ಷೆಗಳಲ್ಲೂ ಬಿಜೆಪಿಯೇ ಜಯ ಗಳಿಸಲಿದೆ, ಸರ್ಕಾರ ರಚಿಸಲಿದೆ ಎಂಬುದು ಮನವರಿಕೆಯಾಗಿದೆ.
Leave A Reply