ಕಾಂಗ್ರೆಸ್ ಪರ ಬ್ಯಾಟ್ ಬೀಸಿದ್ದ ಕಪಿಲ್ ಸಿಬಲ್ ಗೆ ಸುನ್ನಿ ವಕ್ಫ್ ಛಾಟಿ!
ಲಖನೌ: ರಾಮಜನ್ಮಭೂಮಿ-ಬಾಬ್ರೀ ಮಸೀದಿ ಪ್ರಕರಣದ ವಿಚಾರಣೆ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದರಿಂದ ತೀರ್ಪು ಮುಂದೂಡಬೇಕು ಎಂದು ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿದ್ದ ವಕೀಲ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಿಲ್ ಅವರಿಗೆ ಸುನ್ನಿ ವಕ್ಫ್ ಬೋರ್ಡೇ ಛಾಟಿ ಬೀಸಿದೆ.
ಕಪಿಲ್ ಸಿಬಲ್ ಅವರು ನಮ್ಮ ಪರ ವಕೀಲರೇ ಹೊರತು, ನಮ್ಮ ಪ್ರತಿನಿಧಿಯಲ್ಲ. ವಿಚಾರಣೆ, ತೀರ್ಪು ಮುಂದೂಡಬೇಕು ಎಂದು ನಾವು ಕಪಿಲ್ ಸಿಬಲ್ ಅವರಿಗೆ ತಿಳಿಸಿರಲಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ ಅಧ್ಯಕ್ಷ ಜುಫರ್ ಅಹ್ಮದ್ ಫಾರೂಖಿ ಹೇಳಿದ್ದಾರೆ.
ಅಲ್ಲದೆ ಕಪಿಲ್ ಸಿಬಲ್ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದು, ಈ ಹಿನ್ನೆಲೆಯಲ್ಲಿ ಅವರು ವಾದ ಮಂಡಿಸಿರಬಹುದು. ಆದರೆ ನಾವೇನು ಅವರಿಗೆ ವಿಚಾರಣೆ ಮುಂದೂಡುವಂತೆ ತಿಳಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ಪ್ರತಿ ವಿಚಾರಣೆಗೂ ಹಾಜರಾಗುತ್ತಿದ್ದು, ಆದಷ್ಟು ಬೇಗ ಪ್ರಕರಣ ಇತ್ಯರ್ಥವಾದರೆ ಒಳ್ಳೆಯದು. ನಮಗೂ 2019ರ ತನಕ ಕಾಯುವ ಉಮೇದಿ ಹಾಗೂ ತಾಳ್ಮೆ ಇಲ್ಲ ಎಂದಿದ್ದಾರೆ. ಕಪಿಲ್ ಸಿಬಲ್ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಸಹ ದೂರಿದೆ. ವಿವಾದವನ್ನು ಫೆ.8ರಂದು ವಿಚಾರಣೆ ಮಾಡುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
Leave A Reply