ತಾಯಿಗೆ ಗೌರವ ಸಲ್ಲಿಸದೆ, ಅಫ್ಜಲ್ ಗುರುವನ್ನು ಗೌರವಿಸುತ್ತೀರಾ ಎಂದು ವೆಂಕಯ್ಯ ನಾಯ್ಡು ಪ್ರಶ್ನಿಸಿದ್ದೇಕೆ?
ದೆಹಲಿ: ಮೀರತ್ ನ ನೂತನ ಮೇಯರ್ ಬಿಎಸ್ ಪಿ ಸುನೀತಾ ವರ್ಮಾ ಅವರು ಪಾಲಿಕೆ ಮಂಡಳಿ ಸಭೆಯಲ್ಲಿ ವಂದೇ ಮಾತರಂ ಹಾಡಬೇಕು ಎಂದು ಕಡ್ಡಾಯಗೊಳಿಸಿದ ಬಿಜೆಪಿ ಮೇಯರ್ ಆದೇಶ ರದ್ದುಗೊಳಿಸಿರುವುದಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದು, ವಂದೇ ಮಾತರಂಗೆ ಗೌರವ ನೀಡದೆ, ಉಗ್ರ ಅಫ್ಜಲ್ ಗುರುವನ್ನು ಗೌರವಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ವಂದೇ ಮಾತರಂ ಎಂದರೆ ತಾಯಿಗೆ ವಂದನೆ, ದೇಶಕ್ಕೆ ವಂದನೆ ಎಂದು ಅರ್ಥ. ಆದರೆ ತಾಯಿಗೆ ವಂದನೆ ಸಲ್ಲಿಸಲು ಆಗುವುದಿಲ್ಲ ಎನ್ನುತ್ತೀರಲ್ಲ ನಿಮ್ಮ ಸಮಸ್ಯೆಯಾದರೂ ಏನು? ತಾಯಿಯನ್ನು ವಂದಿಸದೆ ಅಫ್ಜಲ್ ಗುರುವಿಗೆ ವಂದನೆ ಸಲ್ಲಿಸುತ್ತೀರಾ ಎಂದು ದೆಹಲಿಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಾಲ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಛಾಟಿ ಬೀಸಿದ್ದಾರೆ.
ಮಾತೃಭೂಮಿಯನ್ನು ಗೌರವಿಸುವುದು ಪ್ರತಿ ಭಾರತೀಯನ ಕರ್ತವ್ಯ. ಬಣ್ಣ, ಜಾತಿ, ಧರ್ಮದ ಹೊರತಾಗಿಯೂ ದೇಶದ ಎಲ್ಲರೂ ರಾಷ್ಟ್ರವನ್ನು ಗೌರವಿಸಬೇಕು ಎಂದು ಕರೆ ನೀಡಿದರು.
ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್ ಆಡಳಿತದಲ್ಲಿದ್ದಾಗ ಸಭೆ ವೇಳೆ ವಂದೇ ಮಾತರಂ ಕಡ್ಡಾಯಗೊಳಿಸಿದ್ದರು. ಆದರೆ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಸುನಿತಾ ವರ್ಮಾ ಅವರು ವಂದೇ ಮಾತರಂ ಹಾಡುವ ಆದೇಶ ರದ್ದುಗೊಳಿಸಿದ್ದರು.
Leave A Reply