ನಿವೃತ್ತ ಸೈನಿಕ ಆಯ್ತು, ಈಗ ಬಿಪಿನ್ ರಾವತ್ ಅವರಿಂದ ಮಕ್ಕಳಿಗೆ ದೇಶಪ್ರೇಮದ ಪಾಠ!

ಭೋಪಾಲ್: ನೀವು ದೇಶದ ಭವಿಷ್ಯ. ನಿಮ್ಮ ಆದ್ಯತೆಯಲ್ಲಿ ದೇಶವೇ ಮೊದಲಾಗಿರಬೇಕು. ನಿಮ್ಮ ಮನದಾಳದಲ್ಲಿ ಸದಾ ಮಿನುಗುತ್ತಿರಬೇಕು. ಇತರ ವಸ್ತುಗಳ ಬಗ್ಗೆ ಗಮನಕ್ಕಿಂತ ದೇಶವೇ ನಿಮ್ಮ ಆಯ್ಕೆಯಾಗಿರಬೇಕು… ವಿದ್ಯಾರ್ಥಿಗಳು ದೇಶದ ರಕ್ಷಣೆಗೆಗಾಗಿ ಸೈನ್ಯಕ್ಕೆ ಸೇರಲು ಮುಂದಾಗಬೇಕು.
ಇದು ಇಂದು ಇಂದೋರ್ ನ ಶಾಲೆಯಲ್ಲಿ 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವಪ್ಪಿದ್ದ ಕ್ಯಾಪ್ಟನ್ ವಿಕ್ರಮ್ ಭಾತ್ರಾ ಮತ್ತು ಮನೋಜ್ ಕುಮಾರ ಪಾಂಡೆ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮಕ್ಕಳಿಗೆ ಹೇಳಿದ ಸ್ಫೂರ್ತಿಯ ನುಡಿ.
ನನ್ನ ಶಾಲಾದಿನಗಳಲ್ಲಿ ನಮ್ಮ ಬಳಿ ಕೇವಲ ಒಂದು ಟಿವಿ ಮಾತ್ರ ಇತ್ತು. ಯಾವುದೇ ಮೊಬೈಲ್, ಅಂತರ್ಜಾಲ ವ್ಯವಸ್ಥೆ ಇರಲಿಲ್ಲ. ಆದರೆ ಇಂದು ನಿಮ್ಮ ಬಳಿ ಮೊಬೈಲ್ , ಅಂತರ್ಜಾಲ ಸೇರಿ ಹಲವು ಆಧುನಿಕ ಸಂಪರ್ಕ ಸಾಧನಗಳಿವೆ. ಅವುಗಳ ಸದ್ಭಳಕೆ ಮಾಡಿಕೊಳ್ಳಬೇಕು. ಶಾಲಾ ಶಿಕ್ಷಣ ಪದ್ದತಿಯೇ ಇದೀಗ ಬದಲಾಗಿದೆ. ಮಕ್ಕಳು ತಮ್ಮ ಗುರಿಯಲ್ಲಿ ಸಾಮಾಜಿಕ ಸೇವೆಯನ್ನು ಮುಖ್ಯವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಬರೀ ಉನ್ನತ ಹುದ್ದೆ ಅಲಂಕರಿಸುವ, ಡಾಕ್ಟರ್, ಎಂಜಿನಿಯರ್ ಆಗುವ ಉದ್ದೇಶ ಇಟ್ಟುಕೊಳ್ಳದೇ, ದೇಶದ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡುವ ಗುರಿಯನ್ನೂ ಇಟ್ಟುಕೊಳ್ಳಿ ಎಂದು ರಾವತ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
Leave A Reply