ಮಂಗಳೂರಿನಲ್ಲಿ ಗುರುಸ್ಮರಣೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಜನಸಾಗರ
ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ತ್ರಿಕಾಲ ಜ್ಞಾನಿಗಳಾಗಿದ್ದರು. ಅವರು ಸಮಾಜದ ಏಳಿಗೆಗಾಗಿ ತಮ್ಮ ಸರ್ವಸ್ವವನ್ನು ಧಾರೆ ಎರೆದರು. ಅವರು ಮಾಡಿದ ತ್ಯಾಗ ಮತ್ತು ಮಾರ್ಗದಶ್ಯನದಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಉದ್ಯಮಿ ದಯಾನಂದ ಪೈ ಹೇಳಿದರು.
ಅವರು ಶ್ರೀಮದ್ ಸುಕೃತೀಂದ್ರ ಪ್ರತಿಷ್ಟಾನದ ವತಿಯಿಂದ ಸಂಘನಿಕೇತನದಲ್ಲಿ ನಡೆದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಹರಿದ್ವಾರದಲ್ಲಿ, ಕಲ್ಪಿಯಲ್ಲಿ ವ್ಯಾಸ ರಘುಪತಿ ದೇವರ ದೇವಸ್ಥಾನವನ್ನು ಕಟ್ಟಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜಿಎಸ್ ಬಿ ಭಾಂದವರಿಗೆ ಉತ್ತರ ಭಾರತದ ಪುಣ್ಯಸ್ಥಳಗಳ ದರ್ಶನ ಭಾಗ್ಯ ಮಾಡಿಸಿದ್ದರು. ಅವರು ತಮ್ಮ ಉತ್ತರಾಧಿಕಾರಿಯಾಗಿ ಮಾಡಿರುವ ಶ್ರೀಮದ್ ಸಂಯಂಮೀಂದ್ರ ತೀರ್ಥರು ಕಾಶೀಮಠದ ಪೀಠಾಧಿಪತಿಯಾಗಿ ನಮಗೆ ಮಾರ್ಗದಶ್ಯನ ಮಾಡುತ್ತಿದ್ದಾರೆ. ಅವರು ತೋರಿಸಿಕೊಟ್ಟ ದಾರಿಯಲ್ಲಿ ನಡೆಯುವುದು ನಮ್ಮ ಕರ್ತವ್ಯ ಎಂದು ದಯಾನಂದ ಪೈ ಹೇಳಿದರು.
ವೇದಮೂರ್ತಿ ನರಸಿಂಹ ಆಚಾರ್ಯ ಮಾತನಾಡಿ ನಾವು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ಭಾಗ್ಯಕ್ಕೆ ಸಂಧ್ಯಾವಂದನೆ, ಜಪ, ತಪಗಳಿಂದ ದೇವರ ಆರಾಧನೆ ಮಾಡಬೇಕು. ಶ್ರೀಮದ್ ಸುಧೀಂದ್ರ ತೀರ್ಥರಿಗೆ ಮಂಗಳೂರಿನ ಬಗ್ಗೆ ತುಂಬಾ ಪ್ರೀತಿ ಇತ್ತು. ಅವರ ಆರೋಗ್ಯ ಹದಗೆಟ್ಟಾಗ ಮಂಗಳೂರಿನಲ್ಲಿ ಕೊಟ್ಟ ಚಿಕಿತ್ಸೆಯಿಂದ ಅವರ ಆರೋಗ್ಯ ಸುಧಾರಿಸಿತ್ತು. ಕಾನೆಗಾಡಿನಿಂದ ಭಟ್ಕಳದ ತನಕ ಇರುವ ಮಂಗಳೂರು ಪ್ರಾಂತ್ಯದಲ್ಲಿ ವಾಸಿಸುವ ಸಮಾಜ ಭಾಂದವರ ಬಗ್ಗೆ ಅವರು ಚಿಂತಿಸುತ್ತಿದ್ದರು ಎಂದರು.
ಬೆಂಗಳೂರು ಕಾಶೀಮಠದ ಕಾರ್ಯದರ್ಶಿ ನಾರಾಯಣ ಶೆಣೈ ಮಾತನಾಡಿ ಕಾಶೀಮಠದ ಪರಿತ್ತಕ್ಯ ಸ್ವಾಮಿ ರಾಘವೇಂದ್ರ ತೀರ್ಥರಿಗೂ ಕಾಶೀಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯವೇ ಹೇಳಿದೆ. ಆದರೂ ಮಠದ ಸ್ವತ್ತನ್ನು ಮಠಕ್ಕೆ ರಾಘವೇಂದ್ರ ಮರಳಿಸದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾವನ, ಚೆಂಪಿ ಶ್ರೀಕಾಂತ್ ಭಟ್ ಸಹಿತ ಇತರರು ಮಾತನಾಡಿದರು. ಡಿ ವೇದವ್ಯಾಸ ಕಾಮತ್ ಸ್ವಾಗತಿಸಿದರು. ಕೊಂಚಾಡಿ ರತ್ನಾಕರ ಕಾಮತ್ ವಂದಿಸಿದರು. ಗಣೇಶ್ ಪ್ರಸಾದ್ ಮಲ್ಯ ನಿರೂಪಿಸಿದರು.
Leave A Reply