ಗುಜರಾತ್ 2ನೇ ಹಂತದ ಚುನಾವಣೆ, ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನರೇಂದ್ರ ಮೋದಿ
ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ಗುರುವಾರ ಭರದಿಂದ ಸಾಗಿದ್ದು, ಸಾಲಿನಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಅವರು ಮತ ಚಲಾಯಿಸಿದ್ದಾರೆ.
ಸಬರಮತಿ ಕ್ಷೇತ್ರದ ರಣಿಪ್ ಎಂಬ ಮತಗಟ್ಟೆಗೆ ತೆರಳಿದ ನರೇಂದ್ರ ಮೋದಿ, ಬಿಗಿ ಭದ್ರತೆಯ ನಡುವೆ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತ ಚಲಾಯಿಸಿದ ಬಳಿಕ ಹೊರಗಡೆ ಬಂದು ಬೆರಳು ತೋರಿಸುತ್ತಲೇ, ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನ ಕರತಾಡನ ಮಾಡಿ ಮೋದಿ ಅವರಿಗೆ ಬೆಂಬಲ ಸೂಚಿಸಿದರು.
ಪ್ರಸ್ತುತ ಸಾಬರಮತಿಯಲ್ಲಿ ಬಿಜೆಪಿ ಶಾಸಕರಾಗಿರುವ ಅರವಿಂದ್ ಪಟೇಲ್ ವಿರುದ್ಧ ಕಾಂಗ್ರೆಸ್ಸಿನ ಜಿತುಭಾಯಿ ಪಟೇಲ್ ಸ್ಪರ್ಧಿಸಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹ ಮತದಾನ ಮಾಡಿದ್ದಾರೆ.
2019ರಲ್ಲಿ ಲೋಕಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ, ಗುಜರಾತಿನಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದು, ಲೋಕಸಭೆ ಚುನಾವಣೆಗೆ ಇದು ಮುನ್ನುಡಿ ಎಂದೇ ಕರೆಯಲಾಗಿದೆ. ಅಲ್ಲದೆ ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಅವರ ನಡುವಿನ ಕಾಳಗ ಎಂದೇ ಬಿಂಬಿಸಲಾಗುತ್ತಿದೆ.
Leave A Reply