ವಂಶಾಡಳಿತದ ವಿರುದ್ಧ ಅಭಿವೃದ್ಧಿಗೆ ಜನ ನೀಡಿದ ತೀರ್ಪು: ಅಮಿತ್ ಶಾ
ದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಕಾಂಗ್ರೆಸ್ ನ ವಂಶಾಡಳಿತಕ್ಕೆ ರೋಸಿ ಹೋಗಿರುವ ಜನರು ಬಿಜೆಪಿಯ ಅಭಿವೃದ್ಧಿಗೆ ನೀಡಿದ ಬೆಂಬಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ ಹೇಳಿದರು.
ದೆಹಲಿಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಭೇರಿಯ ವಿಜಯೋತ್ಸವದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಸ್ಪಷ್ಟ ಬೆಂಬಲ ನೀಡಿದ್ದಾರೆ. ಅಲ್ಲದೇ ಇದು ವಂಶಾಡಳಿತ ಮತ್ತು ಸಮಾಜವನ್ನು ಒಡೆದು ಆಳುವವರ ವಿರುದ್ಧ ಜನರು ನೀಡಿದ ನಿಷ್ಕಳಂಕ ತೀರ್ಪು ಎಂದು ಹೇಳಿದರು.
ನಾವು ಮತ್ತೊಮ್ಮೆ ವಿಜಯೋತ್ಸ ಆಚರಿಸುತ್ತಿದ್ದೇವೆ. ಇದಕ್ಕೆ ಕಾರಣರಾದ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಎಲ್ಲ ಮತದಾರ ಬಂಧುಗಳು ತಮ್ಮ ಸೇವೆ ಮಾಡಲು ಅವಕಾಶ ನೀಡಿದಕ್ಕೆ ಧನ್ಯವಾದ ಎಂದರು. ಕಾಂಗ್ರೆಸ್ ನ ಜಾತಿ, ಧರ್ಮ ರಾಜಕಾರಣವನ್ನು ಜನರು ತಿಸ್ಕರಿಸಿದ್ದಾರೆ. ಸಮಾಜ ಒಡೆಯುವ ಅವರ ಯೋಜನೆ ವಿಫಲವಾಗಿದೆ. ಜನ ನ್ಯಾಯಕ್ಕೆ ಬೆಲೆ ನೀಡಿದ್ದಾರೆ. ಸಮಾಜ ಒಡೆಯಲು ಉದ್ದೇಶಿಸಿದ ಕಾಂಗ್ರೆಸ್ ನ್ನು ತಿರಸ್ಕರಿಸಿ ಜನ ಅಭಿವೃದ್ಧಿಗೆ ಬೆಂಬಲ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರದ ಮೇಲೆ ವಿಶ್ವಾಸ ವಿಟ್ಟಿದ್ದಾರೆ. ಜನ ಅಭಿವೃದ್ಧಿಗೆ ಗೆಲುವು ನೀಡಿದ್ದಾರೆ. ಹಿಮಾಚಲ ಪ್ರದೇಶದ ಜನರು 2/3 ಲೀಡ್ ನೀಡುವ ಮೂಲಕ ಮೋದಿ ಅವರ ಮೇಲಿನ ವಿಶ್ವಾಸವನ್ನು ಇಮ್ಮಡಿಗೊಳಿಸಿದ್ದಾರೆ ಎಂದು ಹೇಳಿದರು.
2022ರವರೆಗೆ ಬಿಜೆಪಿ ವಿಜಯಕಹಳೆ: 2019ರಲ್ಲೂ ಬಿಜೆಪಿ ಕೇಂದ್ರದಲ್ಲಿ ನರೇಂದ್ರ ಮೋದಿಜೀ ಅವರ ನಾಯಕತ್ವದಲ್ಲಿ ಗೆಲುವು ಸಾಧಿಸಲಿದೆ. ನಾವು ಮತ್ತೊಮ್ಮೆ ಜನರ ಬೆಂಬಲದಿಂದ ಅಧಿಕಾರದ ಗದ್ದುಗೆ ಏರಲಿದ್ದೇವೆ. ಬಿಜೆಪಿ ಮತ್ತು ಅಭಿವೃದ್ಧಿ ಮಂತ್ರದ ಈ ವಿಜಯ ಯಾತ್ರೆ 2022ರವರೆಗೆ ಮುಂದುವರಿಯಲಿದೆ. ಅಲ್ಲದೇ 2018ರಲ್ಲಿ ಬರಲಿರುವ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಜಯ ಸಾಧಿಸಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
Leave A Reply