ರಾಜಸ್ಥಾನದಲ್ಲಿ ರಾಣಿ ಪದ್ಮಾವತಿ ಪುತ್ಥಳಿ ನಿರ್ಮಿಸಲು ಸರ್ಕಾರ ನಿರ್ಧಾರ!
ಜೈಪುರ: ರಾಣಿ ಪದ್ಮಾವತಿ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ಜತೆ ಆತ್ಮೀಯ ದೃಶ್ಯ ಚಿತ್ರೀಕರಿಸಿದ ಆರೋಪದಲ್ಲಿ ಸಂಜಯ್ ಲೀಲಾ ನಿರ್ದೇಶನದ “ಪದ್ಮಾವತಿ” ಚಿತ್ರ ಬಿಡುಗಡೆಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾದ ಬೆನ್ನಲ್ಲೇ, ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಾಣಿ ಪದ್ಮಾವತಿ ಪುತ್ಥಳಿ ನಿರ್ಮಿಸಲು ಮುಂದಾಗಿದೆ.
ಈ ಕುರಿತು ಕಳೆದ ನವೆಂಬರ್ ನಲ್ಲಿ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಅವರು ಶಿಲ್ಪಿಗಳ ಜತೆ ಸಭೆ ನಡೆಸಿದ್ದು, ಶೀಘ್ರವೇ ಪದ್ಮಾವತಿಯ 9 ಅಡಿ ಉದ್ದದ ಮೂರ್ತಿ ಸ್ಥಾಪನೆ ಕೈಗೊಂಡು ಮುಗಿಸಬೇಕು ಎಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉದಯಪುರದ ಚಿತ್ತೂರಿನಲ್ಲಿ ಪದ್ಮಾವತಿಯ ಪುತ್ಥಳಿ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, 5-6 ತಿಂಗಳಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಅಲ್ಲದೆ, ರಜಪೂತರ ಅರಸರಾದ ಪನ್ನಾ ತೈ, ರಾಣಾ ಕುಂಭ, ಬಪ್ಪ ರವಾಲ್ಜಿ ಸೇರಿ ಹಲವು ಗಣ್ಯರ ಮೂರ್ತಿ ಸ್ಥಾಪನೆ ಮಾಡಬೇಕು ಎಂದು 2016ರಲ್ಲೇ ವಸುಂಧರಾ ರಾಜೆ ಸರ್ಕಾರ ಆದೇಶ ಹೊರಡಿಸಿದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದಲ್ಲಿ ಇತಿಹಾಸ ತಿರುಚಲಾಗಿದೆ ಹಾಗೂ ಪದ್ಮಾವತಿಯನ್ನು ಅಸಭ್ಯವಾಗಿ ಚಿತ್ರೀಕರಿಸಲಾಗಿದೆ ಎಂದು ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು.ಅಲ್ಲದೆ, ಕಾಂಗ್ರೆಸ್ ಸರ್ಕಾರವಿರುವ ಪಂಜಾಬ್ ಸೇರಿ ಹಲವು ರಾಷ್ಟ್ರಗಳು ಬಿಡುಗಡೆ ನಿಷೇಧಿಸಿದ್ದವು. ಹಾಗಾಗಿ ಡಿ.1ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಮುಂದೂಡಲಾಗಿದೆ. ಏತನ್ಮಧ್ಯೆಯೇ ಸರ್ಕಾರ ರಾಣಿ ಪದ್ಮಿನಿ ಪುತ್ಥಳಿ ಸ್ಥಾಪನೆಗೆ ಮುಂದಾಗಿರುವುದು ರಜಪೂತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.
Leave A Reply