ಇಂದು ತ್ರಿವಳಿ ತಲಾಖ್ ವಿರುದ್ಧ ಮಸೂದೆ ಮಂಡನೆ ಸಾಧ್ಯತೆ, ಸಂಸದರಿಗೆ ಹಾಜರಿರಲು ಸೂಚನೆ
ದೆಹಲಿ: ಬಹು ನಿರೀಕ್ಷಿತ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಗುರುವಾರ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರ್ಕಾರ ಮಸೂದೆ ಮಂಡನೆ ಮಾಡುವ ಸಾಧ್ಯತೆ ಇದೆ.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಸಂಸತ್ತಿನಲ್ಲಿ ಮುಸ್ಲಿಂ ಮಹಿಳಾ (ಮದುವೆಯ ರಕ್ಷಣಾ ಹಕ್ಕುಗಳು) ಮಸೂದೆ ಪರಿಚಯ ಮಾಡಲಿದ್ದಾರೆ ಎಂದು ಲೋಕಸಭೆ ವೆಬ್ ಸೈಟ್ ನಲ್ಲಿರುವ “ಲಿಸ್ಟ್ ಆಫ್ ಬ್ಯುಸಿನೆಸ್” ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ ಮಸೂದೆ ಮಂಡನೆ ಹಿನ್ನೆಲೆಯಲ್ಲಿ ಬಿಜೆಪಿಯ ಎಲ್ಲ ಸಂಸದರಿಗೆ ಪಕ್ಷ ವಿಪ್ ಜಾರಿ ಮಾಡಿದ್ದು, ಕಡ್ಡಾಯವಾಗಿ ಅಧಿವೇಶನದಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮುಸ್ಲಿಂ ಮಹಿಳಾ ಮಸೂದೆ ಅಂಗೀಕಾರವಾದರೆ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚನೆಯಾಗಲಿದ್ದು, ತ್ರಿವಳಿ ತಲಾಖ್ ನೀಡುವವರಿಗೆ ಮೂರು ವರ್ಷ ಜೈಲು ಶಿಕ್ಷೆ, ಮಹಿಳೆಯ ಜೀವನೋಪಾಯಕ್ಕೆ ಪರಿಹಾರ ಸೇರಿ ಹಲವು ಅಂಶಗಳು ಅಡಕವಾಗಲಿವೆ ಎಂದು ಮೂಲಗಳು ತಿಳಿಸಿವೆ.
ಅಖಿಲ ಭಾರತ ಮುಸ್ಲಿಂ ಮಹಿಳಾ ಆಂದೋಲನ ಸೇರಿ ಲಕ್ಷಾಂತರ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ವಿರುದ್ಧ ಅಭಿಯಾನ ಆರಂಭಿಸಿದ ಪರಿಣಾಮವಾಗಿ ಸುಪ್ರೀಂ ಕೋರ್ಟ್ ಆ.22ರಂದು ತ್ರಿವಳಿ ತಲಾಖ್ ರದ್ದುಗೊಳಿಸಿ ಆದೇಶ ನೀಡಿತ್ತು. ಅಲ್ಲದೆ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾನೂನು ರಚಿಸಲು ಮುಂದಾಗಿದೆ.
Leave A Reply