ಕುಲಭೂಷಣ ಜಾಧವ್ ಕುಟುಂಬಸ್ಥರಿಗೆ ವೀಸಾ ನೀಡಿದ ಪಾಕಿಸ್ತಾನ!
ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪದಲ್ಲಿ ಭಾರತ ನೌಕಾದಳದ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿ ಉದ್ಧಟತನ ಮಾಡಿದ್ದ ಪಾಕಿಸ್ತಾನ, ಜಾಧವ್ ಅವರನ್ನು ಭೇಟಿ ಮಾಡಲು ಕುಟುಂಬಸ್ಥರಿಗೆ ವೀಸಾ ನೀಡಿದೆ.
ಕುಲಭೂಷಣ್ ಜಾಧವ್ ಅವರ ತಾಯಿ ಹಾಗೂ ಪತ್ನಿಗೆ ವೀಸಾ ನೀಡಿದ್ದು, ಸೋಮವಾರ ಇಸ್ಲಾಮಾಬಾದ್ ಗೆ ಆಗಮಿಸುವಂತೆ ತಿಳಿಸಿದೆ. ಅಲ್ಲದೆ ಇಬ್ಬರಿಗೂ ಸೂಕ್ತ ರಕ್ಷಣೆ ಹಾಗೂ ಭದ್ರತೆ ಒದಗಿಸುವುದಾಗಿಯೂ ಪಾಕಿಸ್ತಾನ ಮಾಹಿತಿ ನೀಡಿದೆ.
ದೆಹಲಿಯಲಲ್ಲಿರುವ ಪಾಕಿಸ್ತಾನ ಹೈ ಕಮಿಷನ್ ಕುಲಭೂಷಣ್ ಜಾಧವ್ ಪತ್ನಿ ಹಾಗೂ ತಾಯಿಗೆ ವೀಸಾ ನೀಡಿದೆ ಎಂದು ವಿದೇಶ ಕಚೇರಿಯ ವಕ್ತಾರ ಮೊಹಮ್ಮದ್ ಫೈಸಲ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.
ಕಳೆದ ಡಿಸೆಂಬರ್ 17ರಂದು “ಜಾಧವ್ ಅವರ ಪತ್ನಿ ಹಾಗೂ ತಾಯಿ ಸಲ್ಲಿಸಿದ ವೀಸಾ ಅರ್ಜಿ ಪರಿಶೀಲಸುತ್ತಿದ್ದು, ವೀಸಾ ಮಂಜೂರು ಮಾಡುವ ಕುರಿತು ಪ್ರಕ್ರಿಯೆ ನಡೆಯುತ್ತಿದೆ ಎಂದು ಪಾಕಿಸ್ತಾನ ತಿಳಿಸಿತ್ತು. ಕೊನೆಗೂ ವೀಸಾ ನೀಡಿದ್ದು, ಜಾಧವ್ ಪತ್ನಿ ಹಾಗೂ ತಾಯಿ ಸೋಮವಾರ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲಿದ್ದಾರೆ.
ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಿ ಜಾಧವ್ ಅವರನ್ನು ಜೈಲಿನಲ್ಲಿಟ್ಟದ್ದ ಪಾಕಿಸ್ತಾನ ಕಳೆದ ಏಪ್ರಿಲ್ 17ರಂದು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಭಾರತ ಇದನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದಲ್ಲದೇ, ಸಮರ್ಥ ವಾದ ಮಂಡಿಸಿ ಪಾಕಿಸ್ತಾನದ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಮಾಡಿತ್ತು. ಕೊನೆಗೆ ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಜಾಧವ್ ಕುಟುಂಬಸ್ಥರ ಭೇಟಿಗೆ ಅನುಮತಿ ನೀಡಿದೆ.
Leave A Reply