ಕಾಂಗ್ರೆಸ್ಸಿನಿಂದ ದೇಶದ ಸಂಪ್ರದಾಯ ಹಾಳು: ಯೋಗಿ ಆದಿತ್ಯನಾಥ
ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಹನುಮಾನ ಜಯಂತಿ ಆಚರಿಸುವ ಬದಲು ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಮೂಲಕ ದೇಶದ ಸಂಪ್ರದಾಯ ಹಾಳು ಮಾಡಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ದೇಶವನ್ನು ಸಾಂಪ್ರದಾಯಿಕವಾಗಿ ಒಡೆದು ಆಳುವ ಕಾಂಗ್ರೆಸ್ಸಿನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಕಾಂಗ್ರೆಸ್ಸಿಗೆ ದೇಶ,ರಾಜ್ಯಗಳ ಅಭಿವೃದ್ಧಿಗಿಂತಲೂ ಸಮಾಜದಲ್ಲಿರುವ ಸಮುದಾಯಗಳನ್ನು ಒಡೆಯಬೇಕು ಎಂಬುದೇ ಧ್ಯೇಯವಾಗಿದೆ. ಅದಕ್ಕಾಗಿಯೇ ಇಂಥ ಆಚರಣೆ ಮಾಡುತ್ತಿದೆ. ಸಮಾಜ ಒಡೆಯುವ ಮೂಲಕ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಪರೋಕ್ಷವಾಗಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ನಿಲುವನ್ನು ಖಂಡಿಸಿದರು.
ಹೀಗೆ ಅಭಿವೃದ್ಧಿಯತ್ತ ಗಮನ ಹರಿಸದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಂತೆ ಕಿತ್ತೆಸೆಯಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದಿಲ್ಲ ಎಂದು ಯೋಗಿ ತಿಳಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಕೊಲೆಯಾದರೂ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
Leave A Reply