ಸಿದ್ದರಾಮಯ್ಯನವರೇ ಮಹದಾಯಿ ಮಾತುಕತೆಗೆ ಪರಿಕ್ಕರ್ ಸಮ್ಮತಿಸಿದಕ್ಕೆ ಖ್ಯಾತೆ ತೆಗೆದಿರುವ ಗೋವಾ ಕಾಂಗ್ರೆಸ್ಸಿಗರನ್ನು ಒಪ್ಪಿಸಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜತೆ ಮಾತನಾಡಿ, ಮಹದಾಯಿ ನೀರಾವರಿ ಯೋಜನೆ ಕುರಿತು ಚರ್ಚಿಸಲು ಒಪ್ಪಿಗೆ ಪಡೆಯಲು ಯಶಸ್ವಿಯಾಗಿದ್ದಾರೆ. ಆದರೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಮಾತುಕತೆಗೆ ಒಪ್ಪಿದನೇ ಗೋವಾ ಕಾಂಗ್ರೆಸ್ ಮುಖಂಡ ಶಾಂತಾರಾಮ್ ನಾಯ್ಕ್ ವಿರೋಧಿಸಿದ್ದಾರೆ. ಮನೋಹರ್ ಪರಿಕ್ಕರ ಮಾತುಕತೆಗೆ ಒಪ್ಪಿಕೊಳ್ಳಬಾರದು, ಚರ್ಚೆ ನಡೆಸಬಾರದು. ಕುಡಿಯುವ ನೀರು ಬಿಡುತ್ತೇವೆ ಎಂಬುದೇ ಅವಾಸ್ತವ ಎಂದು ಘೀಳಿಡುತ್ತಿದ್ದಾರೆ.
ಇದೇ ಅಲ್ಲವೇ ಕಾಂಗ್ರೆಸ್ ಮುಖಂಡರ ಇಬ್ಬಂದಿತನಕ್ಕೆ ಸಾಕ್ಷಿ. ಇತ್ತ ರಾಜ್ಯದ ಜನರಿಗೆ ಮರಳು ಮಾಡಲು ನಾವು ಚರ್ಚೆಗೆ ಸಿದ್ಧ ಎಂದು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಸಿದ್ದರಾಮಯ್ಯ ಅವರ ಪಕ್ಷದವರೇ ಗೋವಾದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾನ್ಯ ಸಿದ್ದರಾಮಯ್ಯನವರು ಕೇವಲ ರಾಜಕೀಯಕ್ಕಾಗಿ ಉತ್ತರ, ಪ್ರತ್ಯುತ್ತರ ನೀಡುವ ಜತೆಗೆ ಸ್ವಲ್ಪನಾದರೂ ಬೆಳವಣಿಗೆಗಳಾಗುವತ್ತ ಗಮನ ಹರಿಸಬೇಕು. ಮೊದಲು ಗೋವಾ ಕಾಂಗ್ರೆಸ್ಸಿಗರ ಮನವೊಲಿಸಬೇಕು.
ಯಡಿಯೂರಪ್ಪಗೆ ಗೋವಾ ಮುಖ್ಯಮಂತ್ರಿ ಪತ್ರ ಬರೆದರು ಎಂದು, ಸಿದ್ದರಾಮಯ್ಯ ಪತ್ರ ಬರೆಯುವುದರಲ್ಲಿ ಯಾವುದೇ ಸಾಧನೆ ಆಗುವುದಿಲ್ಲ. ಗೋವಾ ಸಿಎಂ ಇದುವರೆಗೆ ರಾಜ್ಯದ ಜತೆ ಮಾತುಕತೆಗೆ ಸಿದ್ಧವಾಗಿರಲಿಲ್ಲ, ಮಾತುಕತೆ ಮಾಡೋಣ ಎಂದರೆ ಹಿಂದೆ ಮುಂದೆ ನೋಡುತ್ತಿದ್ದರೂ, ಇದೀಗ ರಾಜ್ಯಕ್ಕೆ ಅನುಕೂಲಕರವಾದ ಪರಿಸ್ಥಿತಿ ಇದೆ. ಅದರ ಸದ್ಭಳಕೆಯಾಗಬೇಕು. ಇಲ್ಲವೇ ತಮ್ಮ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ ‘ಗೋವಾದಿಂದ ಕರ್ನಾಟಕಕ್ಕೆ ಹನಿ ನೀರು ಬಿಡುವುದಿಲ್ಲ ಎಂಬ ಮಾತಿಗೆ ನಿಷ್ಟರಾಗಿ ಇರುತ್ತೀರಿ’ ಎಂಬುದು ತಿಳಿಯಲು, ತಿಳಿಸಲು ಇದು ಸಕಾಲ.
ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರಗಳು ಇವೆ. ಈಗಾಗಲೇ ಗೋವಾ ಮುಖ್ಯಮಂತ್ರಿಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಸೇರಿ ಮುಖಂಡರು ಮಾತುಕತೆಗೆ ಒಪ್ಪಿಗೆ ಸೂಚಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಒಪ್ಪಿಸಿ ಕರೆತರುವುದು ಕಷ್ಟಕರವಲ್ಲ. ಅಲ್ಲದೇ ಇದರಲ್ಲಿ ಮಹಾರಾಷ್ಟ್ರದ ಪಾತ್ರ ನಿರ್ಣಾಯಕ ಎಂಬುದು ನೆನಪಿರಲಿ.
ಮಹಾರಾಷ್ಟ್ರ ಮತ್ತು ಗೋವಾದಲ್ಲಿರುವ ಪ್ರತಿಪಕ್ಷಗಳನ್ನು ಮನವೊಲಿಸುವ ಕಾರ್ಯವನ್ನು ಸಿಎಂ ಸಿದ್ದರಾಮಯ್ಯ ಮಾಡಬೇಕು. ಅದೆಲ್ಲವನ್ನು ಬಿಟ್ಟು ಕೇವಲ ಕಾಟಾಚಾರಕ್ಕೆ ನಿಮ್ಮ ಜತೆ ನಾವು ಮಾತುಕತೆಗೆ ಸಿದ್ಧ ಎಂದು ಕೈ ಕಟ್ಟಿ ಕುಳಿತರೇ, ನಿಮಗೆ ವಿಳೆದೆಲೆ ನೀಡಿ, ಆಹ್ವಾನವನ್ನು ಯಾರು ನಿಡುವುದಿಲ್ಲ. ನೀರು ಬೇಕಾಗಿರುವುದು ಕರ್ನಾಟಕದ ಜನರಿಗೆ, ರಾಜ್ಯದ ಜನರ ಜನಪ್ರತಿನಿಧಿಯಾಗಿ ಗೋವಾ ಮತ್ತು ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡು, ದಿನಾಂಕ, ಸ್ಥಳ ನಿಗದಿ ಮಾಡಿ ಆಹ್ವಾನ ನೀಡಬೇಕು. ಅದನ್ನು ಬಿಟ್ಟು ಪತ್ರ ಬರೆದಿದ್ದೇನೆ ಎಂಬ ಹಮ್ಮಿನಲ್ಲಿ ಕುಳಿತರೇ ಅವಶ್ಯವಿಲ್ಲದ ಕೆಲಸಕ್ಕೆ ಅವರಿಗೆ ಬೇರೆ ಕೆಲಸ ಇಲ್ಲವೇ?
ಬರೀ ಪತ್ರ ಬರೆದು ಕೈ ಚೆಲ್ಲುವುದಕ್ಕೂ ಮೊದಲು ಗೋವಾ ಮತ್ತು ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ನ್ನು ಒಪ್ಪಿಸಿ, ನಂತರ ನಿಮ್ಮ ಪತ್ರ ವ್ಯವಹಾರದ ನಾಟಕ ಮುಂದುವರಿಸಿ. ಇಲ್ಲದಿದ್ದರೇ ರಾಜ್ಯದ ಜನರು ನಿಮ್ಮನ್ನು ಕ್ಷಮಿಸಲಾರರು.
Leave A Reply