ತ್ರಿವಳಿ ತಲಾಖ್ ನಿಷೇಧ ವಿಧೇಯಕ ವಾಪಸ್ ಪಡೆಯಬೇಕು ಎಂದು ಹೇಳಿದ ಆ ಸಂಘಟನೆ ಯಾವುದು ಗೊತ್ತಾ?
ದೆಹಲಿ: ದೇಶಾದ್ಯಂತ ಮುಸ್ಲಿಂ ಮಹಿಳೆಯರಿಗೆ ಮಾರಕವಾಗಿರುವ ತ್ರಿವಳಿ ತಲಾಖ್ ನಿಷೇಧಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ಮಹಿಳಾ ಆಂದೋಲನ ಸಮಿತಿ ಸದಸ್ಯೆಯರು ಅಭಿಯಾನ ನಡೆಸಿದ ಫಲವಾಗಿ, ಸುಪ್ರೀಂ ಕೋರ್ಟೇ ತ್ರಿವಳಿ ತಲಾಖ್ ನಿಷೇಧಿಸಿದ್ದರೂ, ತಲಾಖ್ ಪರ ಮಾತನಾಡುವವರ ಸಂಖ್ಯೆ ಮಾತ್ರ ಕಡಿಮೆಯಿಲ್ಲ.
ಇದೇ ಸಾಲಿನಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ನಿಂತಿದ್ದು, ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ತ್ರಿವಳಿ ತಲಾಖ್ ವಿಧೇಯಕ ವಾಪಸ್ ಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲು ಸಂಘಟನೆ ತೀರ್ಮಾನಿಸಿದೆ.
ಅದಕ್ಕಾಗಿ ದೆಹಲಿಯಲ್ಲಿ ಸಂಘಟನೆ ಸದಸ್ಯರು ಹಾಗೂ ಮುಖಂಡರೊಂದಿಗೆ ತುರ್ತು ಸಭೆ ನಡೆಸಿದ್ದು, ತ್ರಿವಳಿ ತಲಾಖ್ ನಿಷೇಧ ವಿಧೇಯಕ ಮಹಿಳೆಯರ ವಿರೋಧಿಯಾಗಿದೆ. ಇದರಿಂದ ವಿವಿಧ ಕುಟುಂಬಗಳು ನಾಶವಾಗಲಿವೆ. ಹಾಗಾಗಿ ವಿಧೇಯಕ ವಾಪಸ್ ಪಡೆಯುವಂತೆ ಮೋದಿ ಅವರಿಗೆ ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ದಿಢೀರ್ ಅಂತ ತ್ರಿವಳಿ ತಲಾಖ್ ನೀಡುವುದನ್ನು ಸಂಘಟನೆಯೂ ವಿರೋಧಿಸುತ್ತದೆ. ಆದರೆ ನಿಷೇಧ ವಿಧೇಯಕ ಮಂಡನೆ ವೇಳೆ ಸರ್ಕಾರ ಸಂಬಂಧಪಟ್ಟವರನ್ನು ಸಂಪರ್ಕಿಸಿಲ್ಲ. ತಲಾಖ್ ನೀಡಿದರೆ ಪರಿಹಾರ ಹಾಗೂ ಜೈಲು ಎರಡನ್ನೂ ವಿಧಿಸಲಾಗಿರುವುದು ಸಮಂಜಸ ಅಲ್ಲ. ಹಾಗಾಗಿ ವಾಪಸ್ ಪಡೆಯಬೇಕು ಎಂದು ಸಂಘಟನೆ ಮುಖಂಡರು ಹೇಳಿದ್ದಾರೆ.
ಆದರೆ ಲಕ್ಷಾಂತರ ಮುಸ್ಲಿಂ ಮಹಿಳೆಯರ ಒಕ್ಕೊರಲ ಧ್ವನಿಗೆ ಓಗೊಟ್ಟ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ರದ್ದುಗೊಳಿಸಿ ಆದೇಶಿಸಿದೆ. ಇದೇ ದಿಸೆಯಲ್ಲಿ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧ ಕರಡು ರಚಿಸಿ ದೇಶದ ಎಲ್ಲ ರಾಜ್ಯಗಳಿಗೆ ರವಾನಿಸಿ, ಸಲಹೆ ಪಡೆಯಲು ಮುಂದಾಗಿದೆ. ಆದರೂ ಇಂಥ ಸಂಘಟನೆಗಳು ಮಾತ್ರ ತ್ರಿವಳಿ ತಲಾಖ್ ನಿಂದ ಕುಟುಂಬ ನಾಶವಾಗುತ್ತಿವೆ ಎಂದು ಬೊಬ್ಬೆ ಹಾಕುತ್ತಿವೆ.
Leave A Reply