ಸಿಎಂ ಮನೋಹರ್ ಪಾರಿಕ್ಕರ್ ಕುಮುಟಾಕ್ಕೆ ರೈಲಿನಲ್ಲಿ ಬಂದು ಹೋದ್ರು!
ನಾನು ಪ್ರಧಾನಮಂತ್ರಿ ಅಲ್ಲ, ನಿಮ್ಮ ಪ್ರಧಾನ ಸೇವಕ ಎನ್ನುವ ಮಾತನ್ನು ಹೇಳಿದ ನರೇಂದ್ರ ಮೋದಿಯವರ ಆ ವಾಕ್ಯದ ಶಬ್ದಗಳನ್ನು ನಿಜವಾಗಿಯೂ ಅನುಷ್ಟಾನಕ್ಕೆ ತರುತ್ತಿರುವ ಯಾವುದಾದರೂ ರಾಜ್ಯದ ಮುಖ್ಯಮಂತ್ರಿ ಇದ್ದರೆ ಅದು ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್. ಇದು ಮತ್ತೊಮ್ಮೆ ಸಾಬೀತಾಗಿದೆ. ಸಿಎಂ ಮನೋಹರ್ ಪಾರಿಕ್ಕರ್ ಅವರು ಭಾನುವಾರ ಕರ್ನಾಟಕದ ಕುಮುಟಾದ ಚಿತ್ತರ್ಗಿ ವಿಷ್ಣುತೀರ್ಥದಲ್ಲಿ ಹಮ್ಮಿಕೊಂಡಿದ್ದ ಜಿಎಸ್ ಬಿ ಸಮಾಜದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರು ಕರ್ನಾಟಕಕ್ಕೆ ಬಂದಿರುವುದರಿಂದ ಏನು ವಿಶೇಷ ಎಂದು ನಿಮಗೆ ಅನಿಸಬಹುದು. ಅವರು ಪಣಜಿಯಿಂದ ಬಂದಿರುವುದು ನಾವು ನೀವು ಜನಸಾಮಾನ್ಯರು ಪ್ರಯಾಣಿಸುವ ಸಾಮಾನ್ಯ ರೈಲಿನಲ್ಲಿ. ರೈಲಿನಲ್ಲಿ ಅವರು ಬಂದಾಗ ಯಾವುದೂ ಬಾಜ, ಭಜಂತ್ರಿಗಳು ಅವರೊಂದಿಗೆ ಇರಲಿಲ್ಲ. ಸಿಂಪಲ್ಲಾಗಿ ಬಂದ್ರು, ಕುಮುಟಾದ ಕೆಲವು ದೇವಸ್ಥಾನಗಳಿಗೆ ಭೇಟಿಕೊಟ್ಟರು. ದೇವರ ದರುಶನ ಪಡೆದು ವಿಷ್ಣುತೀರ್ಥಕ್ಕೆ ತೆರಳಿದರು. ಅಲ್ಲಿ ಕಾರ್ಯಕ್ರಮ ಮುಗಿಸಿ ಮತ್ತೆ ರೈಲಿನಲ್ಲಿ ಗೋವಾಕ್ಕೆ ತೆರಳಿ ತಮ್ಮ ಕಾರ್ಯಕ್ರಮದಲ್ಲಿ ಬಿಝಿಯಾದರು.
ಅವರು ನಮ್ಮ ದೇಶದ ನಿಕಟಪೂರ್ವ ರಕ್ಷಣಾ ಸಚಿವರೂ ಕೂಡ ಹೌದು ಎನ್ನುವುದನ್ನು ಮರೆಯುವಂತಿಲ್ಲ. ನೀವು ಮುಖ್ಯಮಂತ್ರಿಯಾಗುವುದಾದರೆ ಮಾತ್ರ ನಾವು ಬೆಂಬಲ ಕೊಡ್ತೇವೆ ಎಂದು ಪಕ್ಷೇತರರು ಹೇಳಿದ ಬಳಿಕ ನರೇಂದ್ರ ಮೋದಿಯವರು ಕಳೆದ ಬಾರಿ ಅನಿವಾರ್ಯವಾಗಿ ತಮ್ಮ ನೆಚ್ಚಿಗೆಯ ನಂಬುಗೆಯ ವ್ಯಕ್ತಿಯನ್ನು ಗೋವಾಕ್ಕೆ ಮರಳಿಸಿದ್ದರು. ಅದು ಮೋದಿ ಪಾರಿಕ್ಕರ್ ಮೇಲೆ ಇಟ್ಟಿರುವ ವಿಶ್ವಾಸ. ಮೋದಿಯವರು ಸಮರ್ಥರು ಯಾವುದೇ ರಾಜ್ಯದಲ್ಲಿ ಇರಲಿ, ಯಾವುದೇ ಜಾತಿ, ಧರ್ಮ ಇರಲಿ, ಅವರ ಜಾತಿ ರಾಜಕಾರಣದಲ್ಲಿ ಪ್ರಭಾವಿ ಇರಲಿ, ಇರದಿರಲಿ, ಅದನ್ನು ಯಾವತ್ತೂ ನೋಡಿಲ್ಲ.
ಅದಕ್ಕೆ ಸಾಕ್ಷಿ ಮನೋಹರ್ ಪಾರಿಕ್ಕರ್ ಹಾಗೂ ಸುರೇಶ್ ಪ್ರಭು. ಇದೇ ಮನೋಹರ್ ಪಾರಿಕ್ಕರ್ ಎಷ್ಟು ಸಿಂಪಲ್ ಮನುಷ್ಯ ಎಂದರೆ ಯಾರದ್ದೋ ಹಿತೈಷಿಗಳ ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ವಧುವರರಿಗೆ ಶುಭಹಾರೈಸಲು ಎಲ್ಲರೂ ಸರದಿ ಸಾಲಿನಲ್ಲಿ ನಿಂತಿದ್ದಾಗ ಇವರು ಕೂಡ ಸರದಿಯಲ್ಲಿಯೇ ನಿಂತು ವಿಶ್ ಮಾಡಿ ಹೋಗಿದ್ದರು. ಇವತ್ತಿನ ದಿನಗಳಲ್ಲಿ ಒಬ್ಬ ಗ್ರಾಮ ಪಂಚಾಯತ್ ಸದಸ್ಯನಾದರೂ ಕೂಡ ತುಂಬಾ ಕೆಲಸ ಉಂಟು ಮಾರ್ರೆ ಎಂದು ಮದುವೆ ಹಾಲ್ ಗಳಲ್ಲಿ ಲೈನ್ ತಪ್ಪಿಸಿ ವೇದಿಕೆ ಮೇಲೆ ಹೋಗಿ ವಿಶ್ ಮಾಡಿ ತಮ್ಮ ಲೆವೆಲ್ ತೋರಿಸುತ್ತಾರೆ. ಹಾಗಿರುವಾಗ ಒಂದು ರಾಜ್ಯದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಯಾವುದೇ ಝಡ್ ಸೆಕ್ಯೂರಿಟಿ ಇಲ್ಲದೆ ಅವರು ಬಂದಿದ್ದಾರಾ, ಇಲ್ಲವಾ ಎನ್ನುವುದು ಕೂಡ ಗೊತ್ತಾಗದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೋಗುವುದನ್ನು ನಮ್ಮ ರಾಜ್ಯದ ಮುಖ್ಯ ಮಂತ್ರಿಗಳು, ಸಚಿವರು, ಅಧಿಕಾರಿಗಳು ಗಮನಿಸಬೇಕು. ಸಾಧಾರಣ ಉಡುಗೆ ತೊಡುಗೆ, ಕಾಲಿಗೊಂದು ಚಪ್ಪಲಿ ಧರಿಸಿ, ಕನ್ನಡಕವನ್ನು ಕುತ್ತಿಗೆಗೆ ನೇತಾಡಿಸಿಕೊಂಡು ಪಾರಿಕ್ಕರ್ ತಾನು ನಿಮ್ಮೊಳಗೊಬ್ಬ ಎಂದು ಸಾಬೀತುಪಡಿಸುತ್ತಾರೆ. ಇವರು ಮನಸ್ಸು ಮಾಡಿದರೆ ಸರಕಾರಿ ಖರ್ಚಿನಲ್ಲಿ ಹೆಲಿಕಾಪ್ಟರ್ ಮೂಲಕವೋ ಅಥವಾ ನಾಲ್ಕೈದು ಗಾಡಿನಲ್ಲಿ ಬುರ್ರನೆ ಧೂಳು ಎಬ್ಬಿಸಿ ಬರಬಹುದಿತ್ತು. ಆದರೆ ಪಾರಿಕ್ಕರ್ ವ್ಯಕ್ತಿತ್ವ ಅದಲ್ಲವೇ ಅಲ್ಲ. ಇದನ್ನು ಈ ಜನ್ಮದಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು ಕಲಿಯುವುದಿಲ್ಲ ಎಂದು ನಮಗೆ ಗೊತ್ತು. ಆದರೆ ಮುಂದೆ ಅಧಿಕಾರದ ಪೀಠ ಏರಲು ಸಿದ್ದರಾಗುತ್ತಿರುವ ಬಿಜೆಪಿ ಮುಖಂಡರಾದರೂ ಮನೋಹರ್ ಪಾರಿಕ್ಕರ್ ವ್ಯಕ್ತಿತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸುವ ಪ್ರಯತ್ನ ಮಾಡಲಿ, ಜನ ಜೈ ಎನ್ನುತ್ತಾರೆ
Leave A Reply