ಅಸ್ಪೃಷ್ಯತೆ ಹಿಂದೂ ಮೌಲ್ಯಗಳಿಗೆ ವಿರುದ್ಧವಾದದ್ದು: ವಿಶ್ವಹಿಂದೂ ಪರಿಷತ್

ಭುವನೇಶ್ವರ: ಅಸ್ಪೃಷ್ಯತೆ ಹಿಂದೂ ಧರ್ಮದ ಮೌಲ್ಯಗಳಿಗೆ ವಿರುದ್ಧವಾದ್ದು, ಅಸ್ಪೃಷ್ಯತೆಗೆ ಹಿಂದೂ ಧರ್ಮದಲ್ಲಿ ಸ್ಥಾನವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. ಭುವನೇಶ್ವರದಲ್ಲಿ ನಡೆದ ವಿಶ್ವಹಿಂದೂ ಪರಿಷತ್ ಟ್ರಸ್ಟಿಗಳ, ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಉಡುಪಿಯಲ್ಲಿ ನಡೆದ ವಿಶ್ವಹಿಂದೂ ಪರಿಷತ್ ಸಮಾವೇಶದಲ್ಲಿ ಅಸ್ಪೃಷ್ಯತೆ ಆಚರಣೆ ವಿರುದ್ಧ ಮತ್ತು ಅಸ್ಪೃಷ್ಯತೆ ತಡೆಯುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಭುವನೇಶ್ವರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ ಮುಖ್ಯವಾದ ಸಭೆಯಲ್ಲಿ ಈ ನಿರ್ಧಾರಕ್ಕೆ ಒತ್ತು ನೀಡಲಾಗಿದೆ. 35 ರಾಷ್ಟ್ರಗಳ ಹಿಂದೂ ಧರ್ಮದ ಮುಖಂಡರು ಭಾಗವಹಿಸಿದ್ದು ಈ ಸಭೆಯನ್ನು ವಿಎಚ್ ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ಭಾಯಿ ತೊಗಾಡಿಯಾ ಉದ್ಘಾಟಿಸಿದರು.
ಸಮಾಜಿಕ ಸಮಾನತೆಯ ವಿಭಾಗ ಸದಾ ದೇಶದಲ್ಲಿ ಸಮಾನತೆ ಸಾಧಿಸಲು ಶ್ರಮಿಸುತ್ತಿದೆ. 52 ವರ್ಷಗಳಿಂದ ನಿರಂತರವಾಗಿ ವಿಎಚ್ ಪಿ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಅಸ್ಪೃಷ್ಯತೆ ಮುಕ್ತ ಭಾರತವನ್ನು ನಿರ್ಮಿಸುವ ಪಣ ತೊಡಲಾಗಿದೆ. ವಿಎಚ್ ಪಿ ದೇಶದ ಹಲವು ಜಿಲ್ಲೆಗಳಲ್ಲಿ 500 ಉನ್ನತ ಜಾತಿಗಳನ್ನು ಗುರುತಿಸಿದ್ದು, ಅವರೆಲ್ಲರೂ ಆರ್ಥಿಕವಾಗಿ, ಸಾಮಾಜಿಕವಾಗಿ ಕೀಳು ಮಟ್ಟದಲ್ಲಿರುವವರ ಸ್ನೇಹ ಬೆಳೆಸಿಕೊಳ್ಳಬೇಕು, ಅವರಿಗೆ ಸಹಾಯ ಮಾಡಬೇಕು ಎಂದು ಸೂಚನೆ ನೀಡಿದೆ.
ಅಲ್ಲದೇ ವಿಶ್ವ ಹಿಂದೂ ಪರಿಷತ್ ನಿಂದ ಡಾ.ಬಿ.ಆರ್ ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ಸಂತ ಕಬೀರ, ನಾರಾಯಣ ಗುರು, ರವಿದಾಸ ಸೇರಿ ಹಲವರ ಜಯಂತಿ ಆಚರಿಸಲು ನಿರ್ಧರಿಸಲಾಯಿತು.