ಲೋಕಸಭೆಯಲ್ಲಿ ಐತಿಹಾಸಿಕ ತ್ರಿವಳಿ ತಲಾಖ್ ಮಸೂದೆ ಅಂಗೀಕೃತ, ಮುಸ್ಲಿಂ ಮಹಿಳೆಯರಿಗಿನ್ನು ಭಯವಿಲ್ಲ
ದೆಹಲಿ: ಬೇಕಾಬಿಟ್ಟಿಯಾಗಿ ಪತ್ನಿಯರಿಗೆ ಮೂರು ಬಾರಿ ತಲಾಖ್ ಎಂದು ಮುಸ್ಲಿಂ ಮಹಿಳೆಯರನ್ನು ಬೀದಿಗೆ ತಳ್ಳುತ್ತಿದ್ದ ಕೆಟ್ಟ ಪದ್ಧತಿಗೆ ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ನಿರ್ಧಾರಕ್ಕೆ ಇಂದು ಲೋಕಸಭೆಯಲ್ಲಿ ಅಂಗೀಕಾರ ಪಡೆಯಲಾಯಿತು. ಮುಸ್ಲಿಂ ಮಹಿಳೆಯರನ್ನು ಸಂಕಷ್ಟದಿಂದ ಪಾರು ಮಾಡುವ, ತ್ರಿವಳಿ ತಲಾಖ್ ನಿಷೇಧ ಮಸೂದೆಗೆ ಲೋಕಸಭೆಯಲ್ಲಿ ಇಂದು ಅಂಗೀಕಾರ ನೀಡಲಾಯಿತು. ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಮಂಡಿಸಿ, ಅಂಗೀಕಾರ ಪಡೆದು, ರಾಜ್ಯಸಭೆಗೆ ಸಾಗಿಸಲಾಯಿತು. ಈ ಮಸೂದೆ ದೇಶದ ಇತಿಹಾಸದಲ್ಲೇ ದಾಖಲಾರ್ಹ ಎಂದು ರವಿಶಂಕರ ಪ್ರಸಾದ್ ಹೇಳಿದರು.
ತ್ರಿವಳಿ ತಲಾಖ್ ಲೋಕಸಭೆಯಲ್ಲಿ ಮಂಡಿಸಿ, ಅದರ ಮೇಲೆ ನಡೆದ ಚರ್ಚೆ ವೇಳೆ ಕಾಂಗ್ರೆಸ್, ಬಿಜೆಡಿ ಮತ್ತು ಸಂಸದ್ ಅಸಾದುದ್ದೀನ್ ಓವೈಸಿ ಮಸೂದೆಯನ್ನು ವಿರೋಧಿಸಿ ಸಂಸತ್ ನಲ್ಲಿ ಗದ್ದಲ ಸೃಷ್ಟಿಸಿದರು. ಅಲ್ಲದೇ ತ್ರಿವಳಿ ತಲಾಖ್ ಮಸೂದೆಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಬೇಕು ಎಂದು ಆಗ್ರಹಿಸಿದರು.
ಈ ಮಸೂದೆ ಬಗ್ಗೆ ಭಾಗಶಃ ಎಲ್ಲ ಪಕ್ಷಗಳು ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ವಿಶೇಷವಾಗಿ ಪ್ರಾದೇಶಿಕ ಮುಸ್ಲಿಂ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಇನ್ನು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಮಸೂದೆಗೆ ಸಹಮತ ವ್ಯಕ್ತಪಡಿಸಿದ್ದು, ಆದರೆ ಮಸೂದೆಯಲ್ಲಿನ ಕೆಲವು ಅಂಶಗಳನ್ನು ಬದಲಾಯಿಸಬೇಕು. ಅದಕ್ಕಾಗಿ ಪರಿಶೀಲನೆ ನಡೆಸಲು ಸದನ ಸ್ಥಾಯಿ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ಲೋಕಸಭೆಯ ಆರ್ ಜೆಡಿ, ಎಐಎಂಐಎಂ, ಬಿಜೆಡಿ, ಎಐಡಿಎಂಕೆ ಮತ್ತು ಎಲ್ಲ ಮುಸ್ಲಿಂ ಪಕ್ಷದ ಸದಸ್ಯರು ಮಸೂದೆಗೆ ವಿರೋಧ ವ್ಯಕ್ತಪಡಿಸಿದರು. ಇದು ಮುಸ್ಲಿಮರ ಪ್ರಕೃತಿಗೆ ವಿರುದ್ಧವಾದ ಮತ್ತು ದೋಷಪೂರಿತವಾದ ಮಸೂದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಅಸಾದುದ್ದೀನ್ ಒವೈಸಿ ಮಾತನಾಡಿ, ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಧಕ್ಕೆ ತರುತ್ತದೆ. ಅಲ್ಲದೇ ಈ ಕಾಯಿದೆ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದರಿಂದ ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರೆಯಲು ಸಾಧ್ಯವೇ ಇಲ್ಲ ಎಂದು ತಮ್ಮ ಆಧಾರ ರಹಿತ ಹೇಳಿಕೆಗಳನ್ನು ಲೋಕಸಭೆಯಲ್ಲಿ ಹೇಳಿದರು.
ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿಕ್ರಿಯೆ ನೀಡಿದ್ದು, ಪ್ರಜಾಪ್ರಭುತ್ವದ ನಿಟ್ಟಿನಲ್ಲಿ ಈ ಕಾಯಿದೆಯನ್ನು ಜಾರಿಗೆ ತರಬೇಕು. ಕೂಡಲೇ ಮಸೂದೆಗೆ ಸುಧಾರಣೆ ತರಬೇಕು, ಇಲ್ಲವೇ ತಿದ್ದುಪಡಿ ಮಾಡಬೇಕು ಅಥವಾ ಮಸೂದೆಯನ್ನು ಪಾಸ್ ಮಾಡಬಾರದು ಎಂದು ಆಗ್ರಹಿಸಿದೆ.
ಮಸೂದೆಯನ್ನು ಆತುರದಲ್ಲಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಎಲ್ಲ ಪ್ರಯತ್ನಗಳನ್ನುಮಾಡುವ ಮೂಲಕ ಮಸೂದೆಯ ಸುಧಾರಣೆಗೆ ಶ್ರಮಿಸಲಾಗುವುದು. ಸದ್ಯ ಕೋರ್ಟ್ ಗೆ ಹೋಗಲು ಅವಕಾಶವಿಲ್ಲ ಎಂದು ಎಐಎಂಪಿಎಲ್ ಬಿ ವಕ್ತಾರ ಮೌಲಾನ್ ಖಲೀಲ್ ಉರ್ ರೆಹೆಮಾನ್ ಸಜ್ಜಾದ್ ನೊಮನಿ ತಿಳಿಸಿದ್ದಾರೆ.
ಮಸೂದೆ ಜಾರಿಯಾದರೆ ತಲಾಖ್ ನೀಡುವುದು ಅಪರಾಧವಾಗುತ್ತದೆ. ಬೇಕಾಬಿಟ್ಟಿಯಾಗಿ ತಲಾಖ್ ನೀಡಿದ ಪತಿಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸುವುದು ಸೇರಿ ನಾನಾ ಶಿಕ್ಷೆಗಳನ್ನು ನೀಡಲಾಗುತ್ತದೆ.
Leave A Reply